ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ಸದ್ಯ ಅತೃಪ್ತಗೊಂಡ ಶಾಸಕರು ರಾಜ್ಯ ಪ್ರವಾಸದಲ್ಲಿರುವ ಶಾ ಭೇಟಿಗಾಗಿ ಸಮಯ ಕೇಳಿದ್ದಾರೆ.
ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಜ.17ರಂದು ನಗರಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅತೃಪ್ತ ಶಾಸಕರು ಉದ್ದೇಶಿಸಿದ್ದು, ಈ ಭೇಟಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಸಂಪುಟ ವಿಸ್ತರಣೆ ವೇಳೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಪ್ರಭಾವಿಗಳಿಗೆ ಮಣೆ ಹಾಕಲಾಗಿದೆ ಎಂಬ ಅಸಮಾಧಾನದ ಮಧ್ಯೆ ಅಮಿತ್ ಶಾ ಅವರ ಬೆಳಗಾವಿ ಭೇಟಿ ಮಹತ್ವ ಪಡೆದುಕೊಂಡಿದೆ.
ಶಾ ಅವರ ಭೇಟಿಗೆ 15ಕ್ಕೂ ಹೆಚ್ಚು ಅಸಮಾಧಾನಿತ ಶಾಸಕರು ಸಮಯ ಕೇಳಿರುವುದು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಧಾರವಾಡ ಶಾಸಕ ಅರವಿಂದ ಬೆಲ್ಲದ ಹಾಗೂ ಪರಿಷತ್ ಸದಸ್ಯ ಎಚ್. ವಿಶ್ವನಾಥ ಸೇರಿ ಹಲವರು ಅಮಿತ್ ಶಾ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ.
PublicNext
16/01/2021 09:14 pm