ಬಾಗಲಕೋಟೆ: ನೋಡಲಾಗದ, ನೋಡಬಾರದ ದೃಶ್ಯಾವಳಿಗಳು ಸಿಡಿಯಲ್ಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಕೂಡಲಸಂಗಮದಲ್ಲಿ ನಡೆದ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಸಿಡಿಗಳಿವೆ. ಅವುಗಳಲ್ಲಿ ಭ್ರಷ್ಟಾಚಾರದ ವಿಡಿಯೋ ಮಾತ್ರವಲ್ಲ, ಕೆಲವು ನೋಡಲು ಆಗದಂತಹ ದೃಶ್ಯಗಳಿವೆ. ಸಿಎಂ ಯಡಿಯೂರಪ್ಪ ಅವರನ್ನು ರಾಜಾಹುಲಿ, ರಾಜಾಹುಲಿ ಎಂದು ಕರೆಯುತ್ತೀರಿ. ಆದರೆ ಅವರ ಮನೆಯಲ್ಲೇ ಕುಟುಂಬಸ್ಥರು ಮಾಡಿರುವ ಕೆಲವು ಸಿಡಿಗಳಿವೆ. ಈ ಸಿಡಿಗಳ ಹಿಂದೆ ಅವರ ಮೊಮ್ಮಕ್ಕಳೆ ಇದ್ದಾರೆ. ಈ ಹಿಂದೆ ಆ ಸಿಡಿಯನ್ನು ಮೂವರು ನನ್ನ ಬಳಿ ತಂದಿದ್ದರು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಿಡಿ ಬ್ಲ್ಯಾಕ್‌ಮೇಲ್ ಮಾಡಿ ಕಾಂಗ್ರೆಸ್ ನಾಯಕರು ಕೂಡ ಅನುದಾನ ಪಡೆಯುತ್ತಿದ್ದಾರೆ. ನಾವು ಅನುದಾನ ಕೇಳಿದರೆ ಹಣ ಇಲ್ಲ ಎನ್ನುತ್ತಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಳಿಯೂ ಸಿಡಿ ಇದೆ ಅನಿಸುತ್ತದೆ. ಅವರು ಮಾತನಾಡುವ ರೀತಿಯಲ್ಲೇ ತಿಳಿಯುತ್ತದೆ. ನನ್ನ ಬಳಿಯೂ ಆ ಸಿಡಿ ಇದ್ದಿದ್ದರೆ ನಾನು ಉಪ ಮುಖ್ಯಮಂತ್ರಿ ಆಗಿರುತ್ತಿದ್ದೆ. ಸಿಡಿ ಬಗ್ಗೆ ಸಿಬಿಐ ತನಿಖೆಯಾಗಲಿ. ಕಾಂಗ್ರೆಸ್ ನಿಜವಾಗಿಯೂ ವಿರೋಧ ಪಕ್ಷವೇ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
PublicNext
14/01/2021 06:56 pm