ಬೆಂಗಳೂರು: ಬಿಜೆಪಿ ಅಂದ್ರೆ ಭಾರತೀಯ ಜನತಾ ಪಾರ್ಟಿ ಅಲ್ಲ ಬ್ಲ್ಯಾಕ್‌ಮೇಲ್ ಜನತಾ ಪಾರ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದ ರೈತರಿಗೆ ಬೆಂಬಲ ಸೂಚಿಸಲು ಕರ್ನಾಟಕ ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಜನವರಿ 20ರಂದು ರಾಜ್ಯದಲ್ಲಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಿ, ರಾಜಭವನ ಮುತ್ತಿಗೆ ಹಾಕಲಾಗುವುದು. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ವಿವಿಧ ಭಾಗಗಳಿಂದ ಬಂದು ಸೇರಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇಶಕ್ಕೆ ಕಾಂಗ್ರೆಸ್ ಮಾರಕ ಎನ್ನುತ್ತಾರೆ. ಯಡಿಯೂರಪ್ಪನವರೇ ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಎಂಬುದನ್ನು ಮರೆಯಬೇಡಿ. ಬಿಜೆಪಿಯಲ್ಲಿರುವ ಶಾಸಕರು, ಸಚಿವರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಅವರ ಇತಿಹಾಸ ಹೇಳುವುದಕ್ಕೆ ಶುರು ಮಾಡಿದರೆ ಸಮಯ ಸಾಕಾಗುವುದಿಲ್ಲ ಎಂದು ಕುಟುಕಿದರು.
ಸಿಡಿ ತೋರಿಸಿ ಬ್ಲಾಕ್ಮೇಲ್ ಮಾಡಿದವರು ಮತ್ತು ಲಂಚ ನೀಡಿದವರಿಗೆ ಯಡಿಯೂರಪ್ಪರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿಯ ಕೆಲ ಮುಖಂಡರು ಆರೋಪ ಮಾಡಿದ್ದಾರೆ. ಈ ಆರೋಪಗಳ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
PublicNext
14/01/2021 03:52 pm