ಕೋಲ್ಕತ್ತಾ: ಬಿಜೆಪಿ ಶಾಸಕರನ್ನು ಖರೀದಿಸಬಹುದೇ ಹೊರತು ಪಕ್ಷವನ್ನಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಬಿಜೆಪಿ ಬೃಹತ್ ಕಾರ್ಯಕ್ರಮದಲ್ಲಿ ಟಿಎಂಸಿಯ ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ, ಚುನಾವಣೆ ಸಮೀಪಿಸುವ ಹೊತ್ತಿಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ ಎಂದು ಕುಹಕವಾಡಿದ್ದರು.
ಶಾ ಅವರ ಕೊಂಕು ನುಡಿಗೆ ತಿರುಗೇಟು ನೀಡಿರುವ ದೀದಿ ಕೆಲವು ಶಾಸಕರನ್ನು ಖರೀದಿಸಿದ ಮಾತ್ರಕ್ಕೆ ಇಡೀ ಟಿಎಂಸಿ ಪಕ್ಷವನ್ನು ಖರೀದಿಸುವ ಭ್ರಮೆ ಇಟ್ಟುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.
ಕೆಲವು ವಚನಭ್ರಷ್ಟ ನಾಯಕರು ಪಕ್ಷ ಬಿಟ್ಟರೆ ನಾನು ಏಕಾಂಗಿಯಾಗುವುದಿಲ್ಲ.
ಪಶ್ಚಿಮ ಬಂಗಾಳದ ಕೋಟ್ಯಂತರ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಹೀಗಾಗಿ ನನ್ನನ್ನು ಏಕಾಂಗಿಯನ್ನಾಗಿ ಮಾಡುವ ಪ್ರಯತ್ನ ಮಾಡಬೇಡಿ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.
ಜೊತೆಗೆ ನಿಮಗೆ ಶಕ್ತಿ ಇದ್ರೆ ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 30 ಕ್ಷೇತ್ರಗಳಲ್ಲಾದರೂ ಗೆದ್ದು ತೋರಿಸಿ ಎಂದು ಬಿಜೆಪಿಗೆ ಸವಾಲು ಹಾಕಿರುವ ಮಮತಾ, ಕೆಲವು ಟಿಎಂಸಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯವನ್ನಾಳುವ ಕನಸು ಕಾಣುತ್ತಿರುವ ಬಿಜೆಪಿ ಬಗ್ಗೆ ಅಯ್ಯೋ ಎನಿಸುತ್ತಿದೆ ಎಂದು ಕುಹಕವಾಡಿದರು.
PublicNext
29/12/2020 07:45 pm