ಬೆಂಗಳೂರು: ದೆಹಲಿಯ ಸಿಂಘೂ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ಹೊಮ್ಮಿಸುತ್ತಿದೆ. ಕೃಷಿ ರಂಗದ ಕಲ್ಯಾಣಕ್ಕೆ ಪ್ರಯೋಗಗಳು ಅವಶ್ಯ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕೇಂದ್ರದ ಕೃಷಿ ಮಸೂದೆಗಳಿಗೆ ಹಿಂಬಾಗಿಲ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ, ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ ಎಂದು ಹೇಳಿದ್ದಾರೆ.
ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಚ್ಯುತಿಯುಂಟು ಮಾಡಬಾರದು. ಮೋದಿ ತಾವು ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ದೇಶದ ಘನತೆಯ ವಿಚಾರದಲ್ಲಿ ಮೋದಿಯವರು ಕೂಡ ನಾಜೂಕಿನಿಂದ ವರ್ತಿಸುತ್ತಾರೆ ಎಂಬ ನಂಬಿಕೆ ನನಗಿದೆ. ಈಗ ಎದ್ದಿರುವ ವಿವಾದವನ್ನು ಪ್ರಧಾನಿಗಳ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ ಹೋರಾಟ ಅಂತ್ಯಗೊಳಿಸುವುದು ಹೆಚ್ಚು ಸೂಕ್ತ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
PublicNext
26/12/2020 02:49 pm