ಬೆಂಗಳೂರು: ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ಮೆಜೆಸ್ಟಿಕ್‌ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನೆ ನಡೆಸಲಾಗಿದೆ.
ವಾಟಾಳ್ ನಾಗರಾಜ್ ಅಚರು ಮೈಸೂರು ಪೇಟ ತೊಟ್ಟು ಮೆಜೆಸ್ಟಿಕ್ ಮುಂಭಾಗದಲ್ಲಿ ಕತ್ತೆಯ ಮೇಲೆ ಮೆರವಣಿಗೆ ಬರುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ಈ ವೇಳೆ ಮಂಗಳವಾದ್ಯಗಳ ದೊಡ್ಡ ತಂಡವು ಸೇರಿತ್ತು. ಮಂಗಳವಾದ್ಯಗಳ ಮಧ್ಯೆ ಕತ್ತೆಯ ಮೇಲೆ ಕುಳಿತುಕೊಂಡು ವಾಟಾಳ್ ನಾಗರಾಜ್ ಇಡೀ ಮೆಜೆಸ್ಟಿಕ್ ರೌಂಡ್ಸ್ ಹಾಕಿದ್ದಾರೆ.
ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಇದು ಒಂದು ಅಪರೂಪದ ಚಳುವಳಿ. ವಿಶ್ವದಲ್ಲೇ ಇಂತಹ ಚಳುವಳಿ ನಡೆದಿಲ್ಲ. ಕತ್ತೆಯ ಮೇಲೆ ಕುಳಿತುಕೊಂಡು ಮೆರವಣಿಗೆ ಮಾಡುವ ಮೂಲಕ ರಾಜ್ಯ ಸರ್ಕಾರದ ನೀತಿಯನ್ನ ವಿರೋಧಿಸುತ್ತಿದ್ದೇವೆ. ಇಂತಹ ಪ್ರತಿಭಟನೆ ನೂರು ವರ್ಷಗಳಾದರೂ ಬರುವುದಿಲ್ಲ. ನಾವೆಲ್ಲರೂ ಪ್ರಾಮಾಣಿಕ ಕನ್ನಡ ಒಕ್ಕೂಟದ ಮುಖಂಡರು ಬಹಳ ನಿರಂತರವಾಗಿ ಹೋರಾಟ ಮಾಡಿದ್ದೇವೆ. ರೈತರಿಗಾಗಿ ನಾವು 50 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ಇನ್ಮುಂದೆ ಮುಂದೇಯೂ ನಮ್ಮ ಉಸಿರು ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
PublicNext
28/09/2020 03:29 pm