ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ನವೆಂಬರ್ 3ಕ್ಕೆ ಮತದಾನ ನಡೆದರೆ ನ.10ರಂದು ಫಲಿತಾಂಶ ಹೊರ ಬೀಳಲಿದೆ.
ಅಕ್ಟೋಬರ್ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಅಕ್ಟೋಬರ್ 17ಕ್ಕೆ ನಾಮಪತ್ರಗಳ ಪರಿಶೀಲನೆ ಇದ್ದು, ಅಕ್ಟೋಬರ್ 19ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಉಪಚುನಾವಣೆಗೆ ಕೊನೆಗೂ ಚುನಾವಣಾ ಆಯೋಗ ದಿನಾಂಕ ನಿಗಧಿ ಮಾಡಿದೆ.
ರಾಜ್ಯದ ಎರಡು ಕ್ಷೇತ್ರ ಸೇರಿದಂತೆ ಚತ್ತೀಸ್‌ಗಡ, ಗುಜರಾತ್, ಹರ್ಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ನಾಗಲ್ಯಾಂಡ್, ಓರಿಸ್ಸಾ, ಉತ್ತರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮಣಿಪುರದ 2 ವಿಧಾನಸಭಾ ಕ್ಷೇತ್ರಗಳು ಮತ್ತು ಬಿಹಾರದ 1 ಲೋಕಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 07 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಈ ಎಲ್ಲಾ 56 ವಿಧಾನಸಭಾ ಕ್ಷೇತ್ರಗಳ ಮತ್ತು ಒಂದು ಲೋಕಸಭಾ ಕ್ಷೇತ್ರದ ಫಲಿತಾಂಶ ನವೆಂಬರ್ 10 ರಂದು ಪ್ರಕಟವಾಗಲಿದೆ.
PublicNext
29/09/2020 05:11 pm