ತುಮಕೂರು: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಮಡಿವಾಳ-ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಮುಖಂಡರು ಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವ, ಮನುಷ್ಯರ ನಡುವೆ ಗೋಡೆಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನದ ಪರವಾಗಿರುವ ನಾವೆಲ್ಲರೂ ದೇಶ ಒಡೆಯುವವರ ಕೈಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕಿದೆ. ರಾಜ್ಯದಲ್ಲಿ 2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 1964 ರಿಂದಲೂ ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದು ವರ್ಗವನ್ನು ಟಾರ್ಗೆಟ್ ಮಾಡಿದರು. ಈಗ ಮತಾಂತರ ನಿಷೇಧ ಕಾಯ್ದೆ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
'ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರೂ ಇಂತಹ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯಬಾರದು. ಈ ದೇಶ ಒಂದು ಧರ್ಮಕ್ಕೆ ಸೇರಿದ್ದಲ್ಲ, ಎಲ್ಲರಿಗೂ ಸಮಾನ ಅವಕಾಶವಿದೆ. ಭಾರತದಲ್ಲಿರುವ ಎಲ್ಲಾ ಧರ್ಮಗಳ ಜನರ ನಡುವೆ ಸಹಬಾಳ್ವೆ ಅಗತ್ಯ' ಎಂದರು.
ಬಿಜೆಪಿ, ಆರ್‌ಎಸ್‌ಎಸ್‌ನವರು ದೂರುವಂತೆ ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ ಹಾಗೂ ಇತರೆ ಕಡೆಗಳಲ್ಲಿ ಅಷ್ಟೊಂದು ಹಿಂದೂ ದೇವಾಲಯಗಳಿರಲು, ಅವರ ಆಸ್ಥಾನದಲ್ಲಿ ಹಿಂದೂ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
PublicNext
23/05/2022 07:02 am