ಬೆಂಗಳೂರು: ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದನ್ನು ತಡೆಯಲು ಈಗಾಗಲೇ ಕಾಯ್ದೆ ಇದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿದೆಗೆ ದುರುದ್ದೇಶದಿಂದ ಹೆಚ್ಚುವರಿ ತಿದ್ದುಪಡಿ ತರುವುದನ್ನು ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ನಿನ್ನೆ (ಗುರುವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ, ಸಮುದಾಯಗಳಿಗೂ ಸಮಾನ ಗೌರವವಿದೆ. ಧಾರವಾಡ, ಕೊಡಗು ಮತ್ತಿತರ ಕಡೆ ಈಗಾಗಲೇ ಏನೇನಾಗಿದೆ ಎಂಬುದನ್ನು ನೋಡಿದ್ದೇವೆ. ನಮ್ಮದು ಜಾತ್ಯತೀತ ದೇಶ ಹಾಗೂ ರಾಜ್ಯ. ಇಡೀ ವಿಶ್ವ ನಮ್ಮನ್ನು ಗಮನಿಸುತ್ತಿದೆ. ಚರ್ಚ್‌ಗಳ(Church) ಮೇಲೆ ದಾಳಿ ಮಾಡುವುದು, ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ಬಿಜೆಪಿ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ರಾಜ್ಯದ ಗೌರವಕ್ಕೆ ಧಕ್ಕೆ ಉಂಟಾಗುವುದಲ್ಲದೆ ಕಾನೂನು ಮತ್ತು ಸುವ್ಯವಸ್ಥೆಗೂ ಭಂಗ ಉಂಟಾಗಲಿದೆ ಎಂದು ಹೇಳಿದರು.
ಕ್ರೈಸ್ತ ಸಮುದಾಯ ಶಿಕ್ಷಣ, ಆರೋಗ್ಯ ಮತ್ತಿತರ ಸಮಾಜ ಸೇವೆಗಳ ಮೂಲಕ ಗಮನ ಸೆಳೆದಿದೆ. ಗೌರವದಿಂದ ಸೇವೆ ಮಾಡುತ್ತಾ ಬಂದಿದೆ. ಅವರ ಮನಸ್ಸಿಗೆ ನೋವುಂಟು ಮಾಡುವುದು ಸರಿಯಲ್ಲ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಬಗ್ಗೆ ಕೆಟ್ಟಸಂದೇಶ ರವಾನೆಯಾಗಲಿದೆ. ಇದರಿಂದ ಹರಿದು ಬರುತ್ತಿರುವ ಬಂಡವಾಳವೂ ನಿಲ್ಲಬಹುದು ಎಂದು ಎಚ್ಚರಿಸಿದರು.
PublicNext
10/12/2021 01:04 pm