ಪುತ್ತೂರು: ರಾಜ್ಯದಲ್ಲಿ ಮತಾಂತರ ತಡೆ ಕಾಯ್ದೆ ಜಾರಿಗೆ ತರದಂತೆ ಆಗ್ರಹಿಸಿ ಪುತ್ತೂರು ಯುನೈಟೆಡ್ ಕ್ರಿಶ್ಚಿಯನ್ಸ್ ಫೋರಂನಿಂದ ಸಹಾಯಕ ಕಮಿಷನರ್ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.
ರಾಜ್ಯ ಸರಕಾರ ಜಾರಿಗೆ ತರಲುದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಮಾಡಬೇಕೆಂದು ಆಗ್ರಹಿಸಿರುವ ಯುನೈಟೆಡ್ ಕ್ರಿಶ್ಚಿಯನ್ಸ್ ಫೋರಂ ರಾಜ್ಯದಲ್ಲಿ ಸರಕಾರವು ‘ಮತಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಕರ್ನಾಟಕದ ಸಮಸ್ತ ಕ್ರೈಸ್ತ ಸಮುದಾಯ ಒಮ್ಮತದಿಂದ ವಿರೋಧಿಸುತ್ತದೆ. ಈಗಾಗಲೇ ನಮ್ಮ ಸಂವಿಧಾನವು ತನ್ನ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ ಎಂದು ಪುತ್ತೂರು ಯುನೈಟೆಡ್ ಕ್ರಿಶ್ಚಿಯನ್ಸ್ ಫೋರಂ ಹೇಳಿದೆ.
ಪರಿಚ್ಚೇದ 25 (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು):ಇತರ ಮೂಲಭೂತ ಹಕ್ಕುಗಳು ಸಾರ್ವಜನಿಕ ಸ್ವಾಸ್ತ್ಯ ಹಾಗೂ ನೈತಿಕತೆ ಸಂರಕ್ಷಿಸಿ ಅಂತಃಕರಣದ ಸ್ವಾತಂತ್ರ್ಯ ಮತ್ತು ಧರ್ಮವನ್ನು ಸ್ವೀಕರಿಸುವ, ಅನುಸರಿಸುವ ಮತ್ತು ಪ್ರತಿಪಾದಿಸುವ ಸ್ವಾತಂತ್ರ್ಯ. ಪರಿಚ್ಛೇದ 26 (ಧರ್ಮ ಸಂಬಂಧಿ ವ್ಯವಸ್ಥೆ ನಿರ್ವಹಿಸುವ ಸ್ವಾತಂತ್ರ್ಯ): ಧಾರ್ಮಿಕ ಹಾಗೂ ಸೇವಾ ಕಾರ್ಯಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ, ನಡೆಸಿಕೊಂಡು ಹೋಗುವುದು. ಹೀಗಿರುವಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು? ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.
PublicNext
20/11/2021 12:13 pm