ದಾವಣಗೆರೆ: ಮುಖ್ಯಮಂತ್ರಿ, ಸಚಿವರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ, ನಮ್ಮದು ಮೀಸಲಾತಿ ಸಿಗಬೇಕೆಂಬ ಹೋರಾಟ. ಎಲ್ಲಾ ಪಕ್ಷದ ನಾಯಕರು ಇದ್ದೇವೆ. ಶೈಕ್ಷಣಿಕ, ಸಾಮಾಜಿಕವಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸುವುದು ಪೂಜ್ಯರ ಗುರಿಯಾಗಿದೆ. ಇನ್ನು ವಚನಾನಂದ ಸ್ವಾಮೀಜಿ ಯಾವಾಗ ಬಂದರೂ ಸ್ವಾಗತ ಮಾಡುತ್ತೇವೆ. ಬಂದರೆ ಬರಬಹುದು, ಇಲ್ಲದಿದ್ದರೆ ಬಿಡಬಹುದು ಎಂದು ಮಾಜಿ ಶಾಸಕರೂ ಆದ 2ಎ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರಾಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಬಂದರು, ಹೋದರು. ಎಸಿಯಲ್ಲಿ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ನಾವು ಬಿಸಿಲಿನಲ್ಲಿ ಹೋರಾಟ ಮಾಡೋರು. ಅವ್ರು ಸಾಫ್ಟ್ ವೇರ್ ನಾವು ಹಾರ್ಡ್ ವೇರ್ ಎಂದು ಹೇಳುವ ಮೂಲಕ ಕಿಚಾಯಿಸಿದರು.
ಯಡಿಯೂರಪ್ಪ ಆರು ತಿಂಗಳೊಳಗೆ ಮೀಸಲಾತಿ ನೀಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ನುಡಿದಂತೆ ನಡೆಯಲಿಲ್ಲ. ಹಾಗಾಗಿ ಸಮಾಜದ ಶಾಪಕ್ಕೆ ಗುರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಈಗ
ಬಸವರಾಜ್ ಬೊಮ್ಮಾಯಿ ಅವರು ಭರವಸೆ ಕೊಟ್ಟಿದ್ದಾರೆ. ಈಡೇರಿಸದಿದ್ದರೆ ಅವರಿಗೂ ಶಾಪ ಖಂಡಿತವಾಗಿಯೂ ತಟ್ಟುತ್ತದೆ ಎಂದು ತಿಳಿಸಿದರು.
ಇನ್ನು ಜಯಮೃತ್ಯುಂಜಯ ಸ್ವಾಮೀಜಿಯವರೂ ಸಹ ಹೋರಾಟಕ್ಕೆ ಬರುವವರಿಗೆ ಬೇಡ ಎನ್ನಲ್ಲ. ವಿಶ್ರಾಂತಿ ತೆಗೆದುಕೊಂಡರೆ ತೆಗೆದುಕೊಳ್ಳಲಿ ಎಂದು ಹೇಳಿದರು.
ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಮಾತನಾಡಿ, ಶ್ರೀಗಳು ಸಮುದಾಯದ ರಾಜಕಾರಣಿಗಳ ಪರವಾಗಿ ಹೋರಾಟ ಮಾಡುತ್ತಿಲ್ಲ, ಪ್ರಚಾರಕ್ಕಾಗಿ ನಡೆಸುತ್ತಿಲ್ಲ. ಮೊದಲನೇ ಹಂತದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮೀಸಲಾತಿ ನೀಡಿದರೆ 20 ಲಕ್ಷ ಜನರನ್ನು ಸೇರಿಸಿ ಅಭಿನಂದನೆ ಸಲ್ಲಿಸುತ್ತೇವೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
PublicNext
30/09/2021 04:35 pm