ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಾಲಯಗಳ ನೆಲಸಮ...ಏಕೆ ಈ ಡಾಂಭಿಕತನ

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾರಥ್ಯದ ಬಿಜೆಪಿ ಸರಕಾರಕ್ಕೆ ಈಗ ಅನಧಿಕೃತ ಧಾರ್ಮಿಕ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಸವಾಲು. ಮೊದಲ ಅಧಿವೇಶನದಲ್ಲಿಯೇ ಬೊಮ್ಮಾಯಿ ಮುಜುಗರ ಎದುರಿಸಬೇಕಾಗಿದೆ.

ಶ್ರೀರಾಮನ ವಂಶಸ್ಥರು, ಹಿಂದುತ್ವದ ವಾರಸುದಾರರು, ಹಿಂದೂ ಧರ್ಮದ ಪಳಿಯುಳಿಕೆಗಳು ಎಂದು ಎದೆ ತಟ್ಟಿ ಹೇಳಿಕೊಳ್ಳುವ ಬಿಜೆಪಿ ನಾಯಕರು, ದೇವಾಲಯಗಳು ನೆಲಕ್ಕುರುಳುತ್ತಿದ್ದರೂ ಮೌನವಾಗಿರುವುದು ಆಶ್ಚರ್ಯವುಂಟು ಮಾಡಿದೆ.

ಆದರೆ ಬಿಜೆಪಿಯ ಹಿಂದುತ್ವವನ್ನು ನಿರಂತರ ಟೀಕಿಸುವ ಕಾಂಗ್ರೆಸ್ಸಿಗರು ಸರಕಾರದ ಕ್ರಮವನ್ನು ಖಂಡಿಸ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಇದು ನಿಮ್ಮ ಹಿಂದೂ ಪರ ನೀತಿಯೇ ಎಂದು ಕುಟುಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಹ ಬಿಜೆಪಿ ಸರಕಾರದ ನಡೆಯನ್ನು ಟೀಕಿಸುವಲ್ಲಿ ಹಿಂದೆ ಬಿದ್ದಿಲ್ಲ.

ಪ್ರತಿ ಪಕ್ಷಗಳ ಪ್ರಹಾರ ಜೊತೆ ಸ್ವಪಕ್ಷೀಯ ಸಂಸದ, ಶಾಸಕರ ಆಕ್ರೋಶಕ್ಕೆ ಗುರಿಯಾದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಧ್ವಂಸ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿ ಎಲ್ಲರ ಕೋಪ ಶಮನಗೊಳಿಸಲು ಯತ್ನಿಸಿದ್ದಾರೆ.

ಅಲ್ಲಿ ಅಯೋಧ್ಯೆಯಲ್ಲಿ ಸಾವಿರಾರು ಕೋಟಿಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದರೆ ಇಲ್ಲಿ ಅದೇ ರಾಮಭಕ್ತ ಹನುಮಂತನ ವಿಗ್ರಹ ತಿಪ್ಪೆಯಲ್ಲಿ ಉರುಳಾಡುತ್ತಿದ್ದರೂ ನೋಡುವವರು ಗತಿ ಇಲ್ಲ. ಇದೇ ಏನು ನಿಮ್ಮ ಭಕ್ತಿ ಶ್ರದ್ಧೆ ಎಂದು ಬಿಜೆಪಿಗರನ್ನು ಜನ ಕೇಳುವಂತಾಗಿದೆ.

ಒಂದು ವೇಳೆ ಇದೇ ಧ್ವಂಸ ಪ್ರಕರಣ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ನಡೆದಿದ್ದರೆ ಏನಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದೇ ಬಿಜೆಪಿ, ಭಜರಂಗದಳದವರ ಹಾರಾಟ ಎಲ್ಲಿಗೆ ಮುಟ್ಟುತ್ತಿತ್ತೋ ಆ ದೇವರೇ ಬಲ್ಲ. ಆದರೆ ಈಗ ಯಾರೂ ತುಟಿ ಪಿಟಕ್ ಎನ್ನುತ್ತಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಸಹ, ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿದ್ದಾರೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ಸಚಿವ ಆರ್ ಅಶೋಕ್, ಕೆ.ಎಸ್ ಈಶ್ವರಪ್ಪ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಮಾತನಾಡಿದ್ದಾರೆ.

ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ 2010 ರಲ್ಲಿಯೇ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಸಂಪೂರ್ಣ ದೇಶಕ್ಕೆ ಅನ್ವಯ. ಬೇರೆ ಯಾವುದೇ ರಾಜ್ಯ ಅನಧಿಕೃತ ಧಾರ್ಮಿಕ ಕಟ್ಟಡ ಒಡೆಯುವ ಸಾಹಸಕ್ಕೆ ಕೈ ಹಾಕಿಲ್ಲ.

ಕಟ್ಟಡ ತೆರವು ಮಾಡುವಾಗ ಯಾವುದೇ ಸಮುದಾಯದ ಭಾವನೆಗೆ ಧಕ್ಕೆಯಾಗದಂತೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಬೇಕು. ಕಟ್ಟಡ ಒಡೆಯುವುದು ಅನಿವಾರ್ಯವಾದಾಗ ಅವುಗಳಿಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಬೇಕು ಎಂಬ ಆಂಶಗಳೂ ತೀರ್ಪಿನಲ್ಲಿ ಅಡಕವಾಗಿವೆ. ಆದರೆ ಈ ಆಂಶಗಳನ್ನು ಮೈಸೂರು ಜಿಲ್ಲಾಡಳಿತ ಪಾಲಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ದೇಶದ ಯಾವುದೇ ರಾಜ್ಯಗಳಲ್ಲಿ ತೆರವು ಕಾರ್ಯಚರಣೆ ನಡೆಯದೇ ಇದ್ದಾಗ ತರಾತುರಿಯಲ್ಲಿ, ಅದೂ 11 ವರ್ಷಗಳ ನಂತರ ಮೈಸೂರು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿರುವುದು ಯಕ್ಷ ಪ್ರಶ್ನೆಯಾಗಿದೆ.

ಕೋರ್ಟ ತೀರ್ಪನ್ನು ಅಧಿಕಾರಿ ವರ್ಗ ಪಾಲಿಸಲೇಬೇಕು, ಪಾಲಿಸಿದ್ದಾರೆ ಅನ್ನೋಣ. ಆದರೆ ಅದೇ ತೀರ್ಪಿನಲ್ಲಿ ಉಲ್ಲೇಖಿಸಿದ ಇತರೆ ಆಂಶಗಳನ್ನು ಸಹ ಅಧಿಕಾರಿಗಳು ಗಮನಿಸಬಹುದಿತ್ತಲ್ಲ. ಇದೇ ಕಾರಣಕ್ಕೆ ಈಗ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗ ತೊಡಗಿದೆ. ಇದು ಜನರ ಶ್ರದ್ಧಾ ಭಕ್ತಿಗಳ ಮೇಲೆ ನಡೆಸಿದ ಪ್ರಹಾರ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಅನಧಿಕೃತ ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಹಂತ ಹಂತವಾಗಿ ಒಡೆಯುವಂತೆ ಆದೇಶಿಸಲಾಗಿದೆಯಂತೆ. ಆಶ್ಚರ್ಯವೆಂದರೆ ಇವುಗಳಲ್ಲಿ 700 ಹಾಗೂ 300 ವರ್ಷಗಳಿಗೂ ಹಳೆಯ ದೇವಾಲಯಗಳೂ ಸೇರಿವೆಯಂತೆ. ಹಾಗಾದರೆ ಇವೂ ಸಹ ಅನಧಿಕೃತ ಎಂದಾದರೆ ಇವುಗಳನ್ನು ಗುರುತಿಸಲು ಮಾನದಂಡಗಳೇನು ಎಂಬುದು ಸ್ಪಷ್ಟವಾಗಿಲ್ಲ.

ಸಿ.ಎಂ ಸೂಚನೆಯಂತೆ ಧ್ವಂಸ ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ. ಮುಂದೆ ಇದು ಯಾವ ಹಂತ ತಲುಪುವುದೋ ಗೊತ್ತಿಲ್ಲ.

ಹುಬ್ಬಳ್ಳಿಯಲ್ಲಿ ಬಿಆರ್ಟಿಎಸ್ ಕಾರಿಡಾರ್ ನಿರ್ಮಾಣ ಸಮಯದಲ್ಲಿ ಇದೇ ಸಮಸ್ಯೆ ಉದ್ಭವವಾಗಿತ್ತು. ಆದರೆ ಅಧಿಕಾರಿಗಳು ಜಾಣತನದಿಂದ ಭೈರಿದೇವರಕೊಪ್ಪ ಬಳಿಯ ಧಾರ್ಮಿಕ ಸ್ಥಳಕ್ಕೆ ಯಾವದೇ ಧಕ್ಕೆ ಮಾಡದಂತೆ ರಸ್ತೆ ತಿರುವು ಕಲ್ಪಿಸಿ ಉಂಟಾಗಬಹದಾಗಿದ್ದ ವಿವಾದವನ್ನು ತಪ್ಪಿಸಿದರು. ಮೈಸೂರು ಜಿಲ್ಲಾಡಳಿತ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದಿತ್ತೇನೋ?

Edited By : Shivu K
PublicNext

PublicNext

15/09/2021 03:36 pm

Cinque Terre

172.25 K

Cinque Terre

25

ಸಂಬಂಧಿತ ಸುದ್ದಿ