ರಾಯಪುರ: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನನ್ನ ತಂದೆ ನಂದಕುಮಾರ್ ಬಾಘೇಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಭರವಸೆ ನೀಡಿದ್ದಾರೆ.
'ಸರ್ವ ಬ್ರಾಹ್ಮಣ ಸಮಾಜ' ನೀಡಿದ ದೂರಿನ ಮೇರೆಗೆ ಶನಿವಾರ ರಾತ್ರಿ ನಂದ ಕುಮಾರ್ (75) ಅವರ ವಿರುದ್ಧ ಡಿ.ಡಿ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡುವಾಗ ನಂದಕುಮಾರ್ ಬಾಘೇಲ್ ಅವರು, 'ಬ್ರಾಹ್ಮಣರು ವಿದೇಶಿಯರು. ಹೀಗಾಗಿ ಅವರನ್ನು ಬಹಿಷ್ಕರಿಸಬೇಕು. ಹಳ್ಳಿಗಳಲ್ಲಿಯೂ ಅವರಿಗೆ ಪ್ರವೇಶ ನೀಡಬಾರದು' ಎಂದು ಜನರಿಗೆ ಕರೆ ನೀಡಿದ್ದಾರೆ ಎಂದು 'ಸರ್ವ ಬ್ರಾಹ್ಮಣ ಸಮಾಜ' ದೂರಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಕಾಪಾಡುವ ಹೊಣೆ ನನ್ನ ಮೇಲಿದೆ. ನನ್ನ ತಂದೆ ಯಾವುದೇ ಸಮಾಜದ ವಿರುದ್ಧ ಹೀಗೆ ಅವಹೇಳನ ಮಾಡಿದ್ದೇ ಹೌದಾದರೆ ನಿಜಕ್ಕೂ ನಾನು ಕ್ಷಮೆ ಕೇಳುತ್ತೇನೆ. ಅವರ ವಿರುದ್ಧ ಖಂಡಿತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
PublicNext
05/09/2021 08:57 pm