ಬೆಂಗಳೂರು: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಹಿನ್ನೆಲೆ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡ ಬೃಹತ್ ನಡಿಗೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದಾರೆ.
ವಿವಿಧೆಡೆಯಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಸಾವಿರಾರು ಕಾರ್ಯಕರ್ತರನ್ನು ದ್ವಾರದಲ್ಲೇ ನಿಂತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಬಳಿ ತಮಟೆ ಬಾರಿಸಿ ಕಾರ್ಯಕರ್ತರ ಜೊತೆ ಡಿಕೆಶಿ ಸಂಭ್ರಮಿಸಿದರು. ಮಧ್ಯಾಹ್ನ 2.20ಕ್ಕೆ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಯಾತ್ರೆ ಆರಂಭವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಸೆಲ್ಫೆಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಗಿಬಿದ್ರು.
ಕಾಲೇಜು ಯುವತಿಯರು ಭರ್ಜರಿ ಸ್ಟೆಪ್ ಹಾಕುತ್ತಾ ಕಾಂಗ್ರೆಸ್ ನಡಿಗೆಗೆ ಸಾಥ್ ನೀಡಿದ್ದಾರೆ. ಎದೆ ಮೇಲೆ, ಕೈ ಮೇಲೆ ಸಿದ್ದರಾಮಯ್ಯರ ಹೆಸರು ಮತ್ತು ಚಿತ್ರವನ್ನ ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿಗಳೂ ಕಾಂಗ್ರೆಸ್ ನಡಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆಯುತ್ತಿದ್ದಾರೆ. ಪಾದಯಾತ್ರೆ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣ ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನ, ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರ ಚಿತ್ರಗಳು ಗಮನ ಸೆಳೆಯುತ್ತಿವೆ. ಜಾನಪದ ಕಲಾ ತಂಡಗಳು ಮೆರುಗು ನೀಡಿದ್ದು, ಕಲಾವಿದರ ಜತೆಗೆ ಫೋಟೋ ತೆಗೆದುಕೊಳ್ಳಲು ಯುವಕ-ಯುವತಿಯರು ಕುಣದಾಡಿದ್ರು.
ಇನ್ನು ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಸಾಲು ಗಟ್ಟಿನಿಂತ ದೃಶ್ಯ ಕಂಡುಬಂತು. ಕಾಂಗ್ರೆಸ್ ಪದಾಯಾತ್ರೆಯು ಮೆಜೆಸ್ಟಿಕ್ನಿಂದ ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಜೆ.ಸಿ. ರಸ್ತೆ, ಮಿನರ್ವ ವೃತ್ತ, ವಿವಿ ಪುರಂ ವೃತ್ತ ಮಾರ್ಗವಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ತಲುಪಿ, ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ತೆರಳಿತು. ದಾರಿಯುದ್ದಕ್ಕೂ ಕಾಂಗ್ರೆಸ್ ನಡಿಗೆಗೆ ಸ್ವಾಗತ ಕೋರುವ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿವೆ.
PublicNext
15/08/2022 06:35 pm