ಲಕ್ನೋ: ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಸ್ಥಾನದಲ್ಲಿದ್ದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಸೇರಿದಂತೆ 32 ಜನರಿಗೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಯನ್ನೂ ನೀಡಿದೆ. ಈ ಮಧ್ಯೆ ಶಿಯಾ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವೊಂದು ಕುತೂಹಲ ಮೂಡಿಸಿದೆ.
ಹಿಂದಿಯಲ್ಲಿ ಪತ್ರ ಬರೆದಿರುವ ರಿಝ್ವಿ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವೆ. ಮೊಘಲ್ ಚರ್ಕವರ್ತಿಗಳು ಹಿಂದುಗಳಿಗೆ ಮಾಡಿದ ಶೋಷಣೆಯನ್ನು ನಾವು ಈಗ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಅವರ ಧಾರ್ಮಿಕ ಸ್ಥಳಗಳನ್ನು ಹಿಂದಿರುಗಿಸುವ ಮೂಲಕ ಹಿಂದೂಗಳಿಗೆ ನ್ಯಾಯ ನೀಡಬಹುದು. ಪೂಜಾ ಸ್ಥಳಗಳ ಕಾಯ್ದೆ- 1991ನ್ನು ರದ್ದುಗೊಳಿಸಿ, ಮೊಘಲ್ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ನಿರ್ಮಿಸಲಾದ ಎಲ್ಲ ಮಸೀದಿಗಳನ್ನೂ ಈಗ ಒಡೆದು, ಅಲ್ಲಿ ದೇವಾಲಯಗಳನ್ನು ಕಟ್ಟಿ ಎಂದಿದ್ದಾರೆ. ಜೊತೆಗೆ ಅಯೋಧ್ಯೆ ರಾಮಜನ್ಮಭೂಮಿ, ಮಥುರಾದ ಕೃಷ್ಣಜನ್ಮಭೂಮಿ, ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಅನೇಕ ದೇಗುಲಗಳನ್ನು ಹೆಸರಿಸಿರುವ ಅವರು, ಇವೆಲ್ಲವೂ ಮೊಘಲರ ದಬ್ಬಾಳಿಕೆಗೆ ಒಳಪಟ್ಟ ಹಿಂದೂಗಳ ಧಾರ್ಮಿಕ ಸ್ಥಳಗಳು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಿಝ್ವಿ, ತಾವು ಪ್ರಧಾನಿಗೆ ಪತ್ರ ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ. 1991ರ ಪೂಜಾಸ್ಥಳಗಳ ಕಾಯ್ದೆಯಿಂದ ಹಲವು ಕಾನೂನು ಬಾಹಿರವಾಗಿ ನಿರ್ಮಿಸಲಾದ ಮಸೀದಿಗಳಿಗೆ ರಕ್ಷಣೆ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
PublicNext
30/09/2020 06:09 pm