ಕೋಲ್ಕತ್ತಾ: ಘನ ಹಾಗೂ ದ್ರವ ತ್ಯಾಜ್ಯದ ಉತ್ಪಾದನೆ ಹಾಗೂ ಸಂಸ್ಕರಣೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 3,500 ಕೋಟಿ ರೂ. ದಂಡ ವಿಧಿಸಿದೆ. ಇನ್ನು ದಂಡ ಪಾವತಿಗೆ 2 ತಿಂಗಳ ಕಾಲಾವಕಾಶವನ್ನು ನ್ಯಾಯಮಂಡಳಿ ನೀಡಿದೆ.
ಪಶ್ಚಿಮ ಬಂಗಾಳದ ನಗರ ಪ್ರದೇಶಗಳಲ್ಲಿ ದಿನಕ್ಕೆ 2,758 ಮಿಲಿಯನ್ ಲೀಟರ್ ಕೊಳಚೆ ಉತ್ಪಾದನೆಯಾಗುತ್ತಿದೆ. ಈ ಪೈಕಿ 1,505 ಮಿಲಿಯನ್ ಲೀಟರ್‌ನಷ್ಟು ಕೊಳಚೆ ಸಂಸ್ಕರಿಸುವ ಸಾಮರ್ಥ್ಯವಿದೆ. ಆದರೂ ದಿನಕ್ಕೆ 1,268 ಲೀಟರ್ ನಷ್ಟು ತ್ಯಾಜ್ಯವನ್ನು ಮಾತ್ರವೇ ಸಂಸ್ಕರಿಸಲಾಗುತ್ತಿದ್ದು, ಉಳಿದ 1,490 ಮಿಲಿಯನ್ ಲೀಟರ್ ನಷ್ಟು ತ್ಯಾಜ್ಯ ಹಾಗೆಯೇ ಉಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಿಡಿ ಕಾರಿರುವ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ.ಗೋಯೆಲ್ ನೇತೃತ್ವದ ಪೀಠ ಈ ದಂಡ ವಿಧಿಸಿದೆ.
2022-23ರ ಬಜೆಟ್ ಪ್ರಕಾರ ನಗರಾಭಿವೃದ್ಧಿ ಹಾಗೂ ಪುರಸಭೆಗಳ ವ್ಯವಹಾರದ ಭಾಗವಾಗಿ 12,818 ಕೋಟಿ ಅನುದಾನವಿದ್ದರೂ ರಾಜ್ಯ ಸರ್ಕಾರ ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡುತ್ತಿಲ್ಲ ಎಂದು ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ. ಭವಿಷ್ಯದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಗಮನಿಸಿ ಈ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
PublicNext
04/09/2022 04:00 pm