ದಾವಣಗೆರೆ: ನನಗೆ ಇನ್ನು ಯಾವ ನೊಟೀಸ್ ಕೂಡ ತಲುಪಿಲ್ಲ. ಎಐಸಿಸಿಯಿಂದ ಬಂದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರ್ಜೆವಾಲ ಸ್ಪಷ್ವವಾಗಿ ಲಕ್ಷ್ಮಣ ರೇಖೆ ಉಲ್ಲಂಘಿಸಿದ್ದಾರೆ ಎಂದು ಹೇಳಿರುವ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು. ನನ್ನ ವಿರುದ್ಧ ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಅಷ್ಟೇ ಎಂದರು.
ನಾನು ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ಪ್ರವಾಸ ಕೈಗೊಂಡಿದ್ದೇನೆ. ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರಿಗೆ ಭೇಟಿ ಮಾಡಿ ದಾವಣಗೆರೆಯಲ್ಲಿ ನಡೆಯುವ ಅಮೃತ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ದೊಡ್ಡವರಿದ್ದಾರೆ. ಅವರ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಯಾವುದನ್ನೂ ದೊಡ್ಡದು ಮಾಡಲು ಹೋಗಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ಬಿಜೆಪಿಯ ಬಿ ಟೀಂ. ಇದರಲ್ಲಿ ಎರಡು ಮಾತಿಲ್ಲ. 2018ರ ವಿಧಾನಸಭೆ ಚುನಾವಣೆ ವೇಳೆ ನನ್ನ ವಿರುದ್ಧ, ಯು. ಟಿ ಖಾದರ್ ಸೇರಿದಂತೆ ಮುಸ್ಲಿಂ ನಾಯಕರ ವಿರುದ್ಧ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದರು. ಈ ಬಾರಿಯೂ ಹೆಚ್ಚಿನ ಸ್ಥಾನಗಳಲ್ಲಿ ಟಿಕೆಟ್ ನೀಡಲಿ. ಇದಕ್ಕೆ ನಮ್ಮ ಅಭ್ಯಂತರ ಏನಿಲ್ಲ ಎಂದು ತಿಳಿಸಿದರು.
PublicNext
27/07/2022 10:15 am