ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವ ಬೆನ್ನಲ್ಲೇ ಪ್ರಭಾವಿಗಳ ಎದೆಯಲ್ಲಿ ನಡುಕ ಹುಟ್ಟಿದೆ.
ಎಸ್ ಐ ನೇಮಕಾತಿ ಅಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವ ಲಾಬಿ ನಡೆಸಿದ್ದಾರೆ. ಅಲ್ಲದೆ, ಎಸ್ ಐ ಹುದ್ದೆಗೆ 60 ಲಕ್ಷರಿಂದ 1 ಕೋಟಿ ರೂ. ವರೆಗೂ ಲಂಚ ಪಡೆದು ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಡಿವೈ ಎಸ್ಪಿಗಳಾದ ಶಾಂತಕುಮಾರ್, ವೈಜನಾಥ ರೇವೂರ, ಆರ್ ಎಸ್ ಐ ಲೋಕೇಶಪ್ಪ, ಎಸ್ ಐ ಲೋಕೇಶ್, ಹೆಡ್ ಕಾನ್ ಸ್ಟೇಬಲ್ ಲೋಕೇಶ್, ಎಸ್ ಡಿಎ ಹರ್ಷ, ಎಫ್ ಡಿಎ ಶ್ರೀಧರ್ ಎಂಬುವ ಈಗಾಗಲೆ ಸಿಐಡಿ ಬಂಧನಕ್ಕೆ ಒಳಗಾಗಿದ್ದಾರೆ.
ಇವರಿಗೆ ದಲ್ಲಾಳಿಗಳಾಗಿ ಕೆಲಸ ಮಾಡಿದ್ದ ಸಬ್ ಇನ್ ಸ್ಪೆಕ್ಟರ್ಗಳು ಸಹ ಬಂಧನಕ್ಕೆ ಒಳಗಾಗಿದ್ದಾರೆ. ಇದೀಗ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿ ಮೇಲೆ ಒತ್ತಡ ಅಥವಾ ಪ್ರಭಾವ ಬಳಸಿರುವ ರಾಜಕೀಯ ಮುಖಂಡರು ಬಣ್ಣ ಬಯಲಾಗುತ್ತಾ ಎಂಬುದು ಕಾದು ನೋಡಬೇಕಿದೆ.
2019ರಲ್ಲಿ ಪೂರ್ವ ವಲಯ ಐಜಿಪಿ ಆಗಿದ್ದ ಅಮೃತ್ ಪೌಲ್, ಸೇವಾ ಹಿರಿತನದ ಆಧಾರದ ಮೇಲೆ 2020ರಲ್ಲಿ ಫೆಬ್ರವರಿ 2ರಂದು ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.
ಇನ್ನು ಇದೇ ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿರುವ ಡಿವೈಎಸ್ ಪಿ ಶಾಂತಕುಮಾರ್ ಗೆ 2021ರ 545 ಪಿಎಸ್ ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎಡಿಜಿಪಿ ಹೆಚ್ಚಿನ ಜವಾಬ್ದಾರಿ ನೀಡಿದ್ದರು. ಈ ವೇಳೆ ಶಾಂತಕುಮಾರ್ ಪರೀಕ್ಷೆಗೂ ಮುನ್ನ ಕೆಲ ಅಭ್ಯರ್ಥಿಗಳ ಜತೆ ಡೀಲ್ ಕುದುರಿಸಿ, ಎಡಿಜಿಪಿ ಹೆಸರಿನಲ್ಲಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದ.
ಸದ್ಯ ಶಾಂತಕುಮಾರ್ ವಿಚಾರಣೆ ವೇಳೆ ಪರೀಕ್ಷಾ ಕಳ್ಳಾಟವನ್ನು ಬಯಲುಗೊಳಿಸಿದ. ತಾನು ಸ್ವೀಕರಿಸಿದ ಹಣದಲ್ಲಿ ಎಡಿಜಿಪಿಗೆ ಪಾಲು ಸೇರಿದೆ ಎಂದು ಹೇಳಿಕೆ ನೀಡಿದ್ದ. ಇದೇ ಹೇಳಿಕೆ ಆಧರಿಸಿ ವಿಚಾರಣೆ ನಡೆಸಿದ ಸಿಐಡಿ ಎಡಿಜಿಪಿ ಅಮ್ರಿತ್ ಪಾಲ್ ಅವರನ್ನು ಅರೆಸ್ಟ್ ಮಾಡಿದೆ.
PublicNext
05/07/2022 07:15 am