ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಆಸ್ತಿ ಗಳಿಕೆ ಕೇಸ್‌: ಹರಿಯಾಣದ ಮಾಜಿ ಸಿಎಂ ಚೌಟಾಲಗೆ 4 ವರ್ಷ ಜೈಲು

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಲೋಕ ದಳ ಪಕ್ಷದ ನಾಯಕ ಓಂ ಪ್ರಕಾಶ್ ಚೌಟಾಲ ಅವರಿಗೆ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 50 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಚೌಟಾಲ ಅವರ ನಾಲ್ಕು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಲಾಗಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

1993 ಮತ್ತು 2006ರ ನಡುವೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಕಾಸ್ ಧುಳ್, ಚೌಟಾಲ ಅವರಿಗೆ ಶಿಕ್ಷೆ ವಿಧಿಸಿದ್ದಾರೆ.

ತಮ್ಮ ಅನಾರೋಗ್ಯ ಮತ್ತು ವೃದ್ಧಾಪ್ಯವನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಶಿಕ್ಷೆ ವಿಧಿಸುವಂತೆ 87 ವರ್ಷದ ಚೌಟಾಲ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಇಂತಹ ಪ್ರಕರಣಗಳಲ್ಲಿ ಸಮಾಜಕ್ಕೆ ಸ್ಪಷ್ಟ ಸಂದೇಶ ಹೋಗಬೇಕಿರುವುದರಿಂದ ಗರಿಷ್ಠ ಶಿಕ್ಷೆ ವಿಧಿಸುವಂತೆ ಸಿಬಿಐ ಮನವಿ ಮಾಡಿತ್ತು. ಅಲ್ಲದೆ, ಚೌಟಾಲ ಅವರು ಉತ್ತಮ ಹಿನ್ನೆಲೆ ಹೊಂದಿಲ್ಲ. ಅವರು ಶಿಕ್ಷೆ ಒಳಗಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ ಎಂದು ಸಿಬಿಐ ವಾದಿಸಿತ್ತು.

1993 ಮತ್ತು 2006ರ ನಡುವೆ ಅವರ ಆದಾಯಕ್ಕಿಂತ ಅತಿ ಹೆಚ್ಚು ಆಸ್ತಿಯನ್ನು ಚೌಟಾಲ ಗಳಿಸಿದ್ದಾರೆ ಎಂದು ಆರೋಪಿಸಿ 2005ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಮಾರ್ಚ್ 26, 2010ರಂದು ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು. ಕಳೆದ ವಾರ ಸಿಬಿಐ ನ್ಯಾಯಾಲಯವು ಚೌಟಾಲ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಚೌಟಾಲಾ 6.09 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಸಿಬಿಐ ವಾದಿಸಿತ್ತು.

Edited By : Vijay Kumar
PublicNext

PublicNext

27/05/2022 04:07 pm

Cinque Terre

32.53 K

Cinque Terre

0

ಸಂಬಂಧಿತ ಸುದ್ದಿ