ನವದೆಹಲಿ: ಹಿಜಾಬ್ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ 'ಹಿಜಾಬ್ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಖಂಡಿತ ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದೇ ಇರುವುದು ಕೂಡ ನನ್ನ ಹಕ್ಕು. ಈ ಕುರಿತಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೇವಲ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರವಲ್ಲ, ಇತರ ಧಾರ್ಮಿಕ ಸಂಘಟನೆಗಳೂ ಕೂಡ ಈ ತೀರ್ಪಿನ ಕುರಿತಾಗಿ ಮೇಲ್ಮನವಿ ಸಲ್ಲಿಸಲಿದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಈ ತೀರ್ಪು ಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ ಎಂದಿದ್ದಾರೆ.
ನಮ್ಮ ಸಂವಿಧಾನದ ಪೀಠಿಕೆಯು ಒಬ್ಬ ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳುತ್ತದೆ. ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ. ಹಾಗೂ ಈ ನಂಬಿಕೆಯನ್ನು ನನಗೆ ಸೂಕ್ತವಾದ ರೀತಿಯಲ್ಲಿ ಅಭಿವ್ಯಕ್ತಿ ಮಾಡುವ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಒಂದು ಆರಾಧನೆಯ ಕ್ರಿಯೆಯಾಗಿದೆ ಎಂದಿದ್ದಾರೆ. ಅಗತ್ಯವಾದ ಧಾರ್ಮಿಕ ಅಭ್ಯಾಸ ಪರೀಕ್ಷೆಯನ್ನು ಪರಿಶೀಲಿಸುವ ಸಮಯ ಕೂಡ ಇದಾಗಿದೆ. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ ಮತ್ತು ನಾಸ್ತಿಕನಿಗೆ ಯಾವುದೂ ಅತ್ಯಗತ್ಯವಲ್ಲ. ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ, ಜನಿವಾರ ಅತ್ಯಗತ್ಯ ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದು ಎನ್ನುವುದೇ ಅಸಂಬದ್ಧ ಎಂದು ಟ್ವೀಟ್‌ನಲ್ಲಿ ಓವೈಸಿ ಬರೆದಿದ್ದಾರೆ.
PublicNext
15/03/2022 06:07 pm