ಹೊಸದಿಲ್ಲಿ: ಪೆಗಾಸಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಉಲ್ಟಾ ಹೊಡೆದಿದೆ. ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಲ್ಟಾ ಹೊಡೆದಿರುವ ಕೇಂದ್ರ ಸರಕಾರ, ವಿಸ್ತೃತ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ.
ಪೆಗಾಸಸ್ ಕುರಿತಾಗಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಳಿತ್ತು. ಆದ್ರೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಲಾಗದು ಎಂದು ಹೇಳಿದೆ.ಇದರಿಂದ ಕುಪಿತಗೊಂಡ ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ, “ಕಳೆದ ವಿಚಾರಣೆ ವೇಳೆಯೇ ಅಫಿಡವಿಟ್ ಸಲ್ಲಿಸುವಂತೆ ಹೇಳಿದ್ದೆವು. ಅದಕ್ಕೆ ಕಾಲಾವಕಾಶವನ್ನೂ ನೀಡಿದ್ದೆವು. ಈಗ ನೀವು ಆಗಲ್ಲ ಎನ್ನುತ್ತಿದ್ದೀರಿ. ನಾವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಕೇಳುತ್ತಿಲ್ಲ. ನಾಗರಿಕರು ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿ ನಮ್ಮ ಮುಂದೆ ಬಂದಿದ್ದಾರೆ. ಅದಕ್ಕೆ ನಮಗೆ ನಿಮ್ಮ ಉತ್ತರ ಬೇಕು. ಇನ್ನು 2-3 ದಿನಗಳಲ್ಲಿ ನಾವು ಮಧ್ಯಂತರ ಆದೇಶ ಹೊರಡಿಸಲಿದ್ದೇವೆ’ ಎಂದು ಹೇಳಿತು.
ಇಸ್ರೇಲ್‌ನ ಬೇಹುಗಾರಿಕ ಸಂಸ್ಥೆ ಮೂಲಕ ತಮ್ಮ ಮೇಲೆ ಕಣ್ಗಾವಲು ಮಾಡಲಾಗಿದ್ದು, ಈ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿ ಗಳ ವಿಚಾರಣೆ ವೇಳೆ ಸರಕಾರ ಈ ಹೇಳಿಕೆ ನೀಡಿದೆ. “ಅಫಿಡವಿಟ್ ಸಲ್ಲಿಕೆಯಿಂದ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರಬಹುದು. ನಾವು ಯಾವ ಸಾಫ್ಟ್ ವೇರ್ ಬಳಸುತ್ತಿದ್ದೇವೆ ಎನ್ನುವುದು ಭಯೋತ್ಪಾದಕರಿಗೆ ತಿಳಿಯಬಾರದು. ಹಾಗಾಗಿ ಅಫಿಡವಿಟ್ ಸಲ್ಲಿಸುವುದಿಲ್ಲ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
PublicNext
14/09/2021 03:39 pm