ಬೆಂಗಳೂರು: ಬಳ್ಳಾರಿಗೆ ಹೋಗಲು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಕೊನೆಗೂ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿದೆ.
ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಗೆ ಅನುಮತಿ ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಸ್ಟೀಸ್ ವಿನೀತ್ ಸಾರನ್ ನೇತೃತ್ವದ ನ್ಯಾಯಪೀಠವು ಇದಕ್ಕೆ ಒಪ್ಪಿಗೆ ನೀಡಿದೆ. ಆದರೆ ಬಳ್ಳಾರಿಗೆ ಯಾವಾಗ ಹೋಗುತ್ತೇನೆ ಎಂದು ಮೊದಲೇ ಎಸ್ಪಿಗೆ ಮಾಹಿತಿ ನೀಡಬೇಕು. ಹಾಗೆಯೇ ಅಲ್ಲಿಂದ ವಾಪಸ್ ಬರುವಾಗಲೂ ಕೂಡ ಎಸ್ಪಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಈ ಮೂಲಕ ರೆಡ್ಡಿ ಅವರಿಗೆ ಈ ಮೊದಲು ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದೆ.
ಈ ಸಂಬಂಧ ಸಿಬಿಐ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮಾಧ್ವಿ ದಿವಾನ್, ಆರೋಪಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದು, ಜತೆಗೆ ಜಾಮೀನು ಷರತ್ತುಗಳನ್ನು ಸಡಿಲಗೊಳಿಸಬಾರದು. ಒಂದು ವೇಳೆ ಅವರನ್ನು ಬಳ್ಳಾರಿಗೆ ತೆರಳಲು ಅವಕಾಶ ನೀಡಿದರೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸುಪ್ರೀಂ ಗಮನಕ್ಕೆ ತಂದಿದ್ದರು.
PublicNext
19/08/2021 05:03 pm