ಬೀಜಿಂಗ್: ಯುದ್ಧ ಭೀತಿಯ ದಟ್ಟ ಕಾರ್ಮೋಡ ಕವಿದಿದ್ದ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಕೊನೆಗೂ ಶಾಂತಿಯ ಬಿಳಿ ಮೋಡ ತೇಲುವಂತಾಗಿದೆ. ಈ ಸಂಬಂಧ ಭಾರತೀಯ ಸೇನೆಯು, ಚೀನಾ ತನ್ನ ಯುದ್ಧ ಟ್ಯಾಂಕ್, ಸೇನೆಯನ್ನು ಹಿಂಪಡೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್‌ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೇನೆಗಳು ವಾಪಸ್ ಹೋಗುವ ಕೆಲಸ ಆರಂಭವಾಗಿದೆ. ಬಹಳ ಕಣ್ಗಾವಲಿನಲ್ಲಿ ಹಂತ ಹಂತವಾಗಿ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಯಲಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ಮಾತನಾಡುತ್ತಾ, ಚೀನಾ ತನ್ನ ಸೇನೆಯನ್ನು ವಾಪಸ್ ಪಡೆಯುತ್ತಿದೆ ಎಂದು ಹೇಳಿದ್ದರು. ಈ ಸಂಬಂಧದ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
PublicNext
11/02/2021 07:37 pm