ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ನಡೆಸಿದ್ದಾರೆ. ಆದಾಯ ಮತ್ತು ಆಸ್ತಿ ಸಂಬಂಧ ಕೆಲವು ದಾಖಲೆಗಳ ಸಮೇತ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಕೆಶಿ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಜೈಲಿಗೂ ಕಳಿಸಿದ್ದರು.
ಇದಾದ ನಂತರ ಜಾಮೀನಿನ ಮೇಲೆ ಡಿ.ಕೆ. ಶಿವಕುಮಾರ್ ಹೊರ ಬಂದಿದ್ದರು. ಈ ನಡುವೆ ಮತ್ತೆ ಅಕ್ಟೋಬರ್ 5 ರಂದು ಡಿಕೆಶಿಗೆ ಸೇರಿದ 14 ಕಡೆ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿತ್ತು.
ಕಳೆದ ನವೆಂಬರ್ 25 ರಂದೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರಿಗೆ ಸಮನ್ಸ್ ನೀಡಿದ್ದರು. ಅದರಂತೆ 2020 ನವೆಂಬರ್ 25 ರಂದು ಡಿ.ಕೆ. ಶಿವಕುಮಾರ್ ವಿಚಾರಣೆ ಎದುರಿಸಿದ್ದರು. ಇಂದು ಎರಡನೇ ಬಾರಿ ಅವರು ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ವಿಚಾರಣೆಗೆ ಹೆಚ್ಚುವರಿ ಆಸ್ತಿ ಗಳಿಕೆ ಕುರಿತು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ ಎನ್ನಲಾಗುತ್ತಿದೆ.
PublicNext
12/01/2021 04:10 pm