ಗದಗ: ರೈತರು ಉತ್ತಿ, ಬಿತ್ತಿ, ಬೆಳೆದ ಬೆಳೆಗಳೆಲ್ಲಾ ವರುಣಾಸುರನ ಅಟ್ಟಹಾಸಕ್ಕೆ ಸಿಲುಕಿ ನಲುಗಿ ಹೋಗಿವೆ. ವರ್ಷ ಧಾರೆ ಈ ವರ್ಷ ರೈತರ ಪಾಲಿಗೆ ಕಣ್ಣೀರ ಧಾರೆಯಾಗಿದೆ. ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾದ್ರೂ ಕೃಷಿ ಸಚಿವರು ಇತ್ತ ಗಮನಿಸುತ್ತಿಲ್ಲ. ಬೆಳೆ ಪರಿಹಾರ ನೀಡುವಲ್ಲಿ ಮೀನಾಮೇಷ ಎಣಿಸುವ ಸರ್ಕಾರದ ಚಳಿ ಬಿಡಿಸಲು ರೈತರು ಸನ್ನದ್ಧರಾಗಿದ್ದಾರೆ. ಪರಿಹಾರ ಕೊಡಿ ಇಲ್ಲವೇ ವಿಷ ನೀಡಿ ಅಂತ ಗದಗ ಜಿಲ್ಲೆ ರೈತರು ಆಕ್ರೋಶ ವ್ಯಕ್ತಪಡಿಸಿದ್ರು. ಗದಗ ಜಿಲ್ಲೆಯ ಬೆಳೆ ಕಳೆದುಕೊಂಡ ಅನ್ನದಾತರ ಅಳಲಿನ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಗದಗ ಜಿಲ್ಲೆಯಲ್ಲಿ ರೈತರು ಈ ವರ್ಷವೂ ವರುಣನ ರೌದ್ರ ನರ್ತನಕ್ಕೆ ಸಿಲುಕಿ ನಲುಗಿಹೋಗಿದ್ದಾರೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಕೃಷಿ ಇಲಾಖೆಗೆ ಒಳಪಡುವ ೯೧,೧೫೮ ಹೆಕ್ಟೇರ್‌ನಷ್ಟು ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ಹೆಸರು, ಶೇಂಗಾ ಬೆಳೆಗೆ ಹಾನಿಯಾಗಿದೆ. ಇನ್ನು ತೋಟಗಾರಿಕೆಗೆ ಸಂಬಂಧಿಸಿದಂತೆ ೬೦೫೭ ಹೆಕ್ಟೇರ್ ನಷ್ಟು ಪೇರಲ, ಮಾವು, ಕಬ್ಬು ಹೀಗೆ ಅನೇಕ ಬೆಳೆಗಳು ನಾಶವಾಗಿವೆ. ಇಷ್ಟೆಲ್ಲಾ ಹಾನಿಯಾದ್ರೂ ಗದಗ ಜಿಲ್ಲೆ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ ಪಾಟೀಲರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಬೆಳೆ ಪರಿಹಾರ ನೀಡದ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಬೆಳೆ ಕಳೆದುಕೊಂಡು ಪರಿಹಾರ ಸಿಗದ ಕಾರಣ ರೈತರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಸರ್ಕಾರದ ವಿರುದ್ಧ ಪ್ರತಿಭಟಿಸಿದ್ರು. ಇದು ಕಣ್ಣೀರು ಒರೆಸುವ ಸರ್ಕಾರವಲ್ಲ, ರೈತರ ಕಣ್ಣಲ್ಲಿ ರಕ್ತ ಸುರಿದ್ರೂ ತಿರುಗಿ ನೋಡದ ಸರ್ಕಾರ ಅಂತ ಕಿಡಿಕಾರಿದ್ರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಬೆಳೆಹಾನಿಯಾಗಿದೆ. ಸಿಎಂ ಕೋವಿಡ್ ನಿಂದ ಬಳಲುತ್ತಿದ್ರೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ೨೦೦ ಕೋಟಿ ರೂಪಾಯಿ ಮಧ್ಯಂತರ ಬೆಳೆ ಪರಿಹಾರ ಘೋಷಣೆ ಮಾಡಿದ್ದಾರೆ. ಗದಗ ಜಿಲ್ಲೆಗೂ ೫ ಕೋಟಿ ಬಿಡುಗಡೆಯಾಗಿದೆ. ರೈತರ ಬಗ್ಗೆ ತಾರತಮ್ಯ ಮಾಡದೇ ಎಲ್ಲಾ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂದಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಘೋಷಣೆ ಮಾಡಿದ ಮಧ್ಯಂತರ ಬೆಳೆ ಪರಿಹಾರ ಅಧಿಕಾರಿಗಳ ಜೇಬು ಸೇರದೇ, ಆದಷ್ಟು ಬೇಗ ರೈತರ ಕೈಗೆ ಸಿಗುವಂತಾಗಲಿ ಎಂಬುದು ಎಲ್ಲರ ಆಶಯ.
PublicNext
09/08/2022 03:31 pm