ಬೆಳಗಾವಿ: ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ 8 ಎಕರೆ 5ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವು ಕಾರ್ಯಾಚರಣೆ ಇಂದು ರಾಯಬಾಗ ತಹಶೀಲ್ದಾರ ರಿಯಾಜುವುದ್ದಿನ ಭಾಗವಾನ ಅವರ ನೇತೃತ್ವದಲ್ಲಿ ನಡೆಯಿತು.
ಕಂಕಣವಾಡಿ ಪಟ್ಟಣದ ಸರ್ವೇ ನಂಬರ್ 348/ಬಿ ದಲ್ಲಿ ಬರುವ ಸುಮಾರು 8 ಎಕರೆ 5 ಗಂಟೆ ಜಮೀನಿನಲ್ಲಿ ಮೂವತ್ತು ವರ್ಷಗಳಿಂದ ಪಟ್ಟಣದ ಕೆಲ ಜನರು ಅತಿಕ್ರಮಣ ಮಾಡಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಮಾನ್ಯ ಉಚ್ಛ ನ್ಯಾಯಾಲಯ ಈ ಜಮೀನು ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ ಆಸ್ತಿ ಎಂದು ಆದೇಶ ನೀಡಿತ್ತು. ಅದರಂತೆ ನೀರಾವರಿ ನಿಗಮದ ಘಟಪ್ರಭಾ ಕಾಲುವೆಗಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ರಾಯಬಾಗ ತಹಶೀಲ್ದಾರ್ ರಿಯಾಜುವುದ್ದಿನ ಭಾಗವಾನ ಅಲ್ಲಿನ ಜನರಿಗೆ ಕೆಲ ದಿನಗಳ ಹಿಂದೆ ಅಕ್ರಮ ಮನೆಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೂ ಮನೆಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಅವರ ಮನೆಗಳನ್ನು ನೆಲಸಮಗೊಳಿಸಿದರು.
ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ರಾಯಬಾಗ ಸಿಪಿಐ ಎಚ್ ಡಿ ಮುಲ್ಲಾ, ಹಾರೂಗೇರಿ, ಪಿಎಸ್ಐ ರಾಘವೇಂದ್ರ ಖೋತ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
PublicNext
01/08/2022 06:29 pm