ಬೆಂಗಳೂರು: ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಎಂಬ ಮಾತಿದೆ. ಆದರೆ ಆ ಹಳ್ಳಿಗಳ ಉದ್ಧಾರಕ್ಕಾಗಿ ದುಡಿಯಬೇಕಾದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಸುಮಾರು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಹೀಗಾಗಿ ರಾಜ್ಯದ ಕೆಲವೆಡೆ ಸರ್ಕಾರದ ಯೋಜನೆ ತಲುಪುವಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ.
ಒಟ್ಟು 727 ಪಿಡಿಓ ಹುದ್ದೆಗಳು, 1591 ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್ 1, ಗ್ರೇಡ್ 2 ಹುದ್ದೆಗಳು, 505 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು ಸದ್ಯ ಖಾಲಿ ಇವೆ. ಈಗ ಕರ್ತವ್ಯದಲ್ಲಿರುವ 127 ಪಿಡಿಓಗಳು ಹೆಚ್ಚುವರಿಯಾಗಿ ಎರಡಕ್ಕಿಂತ ಹೆಚ್ಚು ಪಂಚಾಯ್ತಿಗಳ ಪ್ರಭಾರಿಯಾಗಿ ಕೆಲಸ ಮಾಡ್ತಿದ್ದಾರೆ.
ಸದ್ಯಕ್ಕೆ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ನೇಮಕದ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಬಡ್ತಿಗಳ ಮೂಲಕ ನೇಮಿಸಬಹುದಾದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಈಗಾಗಲೇ ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ನಿರ್ದೇಶಿಸಲಾಗಿದೆ. ಪಿಡಿಒ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ತಿಳಿಸಿದ್ದಾರೆ.
PublicNext
27/12/2021 05:49 pm