ಬೆಂಗಳೂರು: ಆರ್ಥಿಕ ಇಲಾಖೆಯಿಂದ ಹುದ್ದೆ ಭರ್ತಿಗೆ ಒಪ್ಪಿಗೆ ಸಿಕ್ಕ ಕೂಡಲೇ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಯಲಬುರ್ಗಾ ಶಾಸಕ ಆಚಾರ್ ಹಾಲಪ್ಪ ಕೇಳಿಗೆ ಪ್ರಶ್ನೆಗೆ ಉತ್ತರಿಸಿದ ಬಿ. ಸಿ. ಪಾಟೀಲ್, ಕೋವಿಡ್-19 ಆರ್ಥಿಕ ಸಂಕಷ್ಟದಿಂದ ಯಾವುದೇ ಹೊಸ ಹುದ್ದೆ ತುಂಬಲು ಸದ್ಯಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡುತ್ತಿಲ್ಲ. ಹುದ್ದೆ ತುಂಬಲು ಸರ್ಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಶೀಘ್ರವೇ ಖಾಲಿ ಸ್ಥಾನಗಳನ್ನು ತುಂಬಲಾಗುವುದು ಎಂದರು.
2018-19 ಸಾಲಿನಲ್ಲಿ ರಾಜ್ಯದಲ್ಲಿ ಗ್ರೂಪ್-ಎ ಮತ್ತು ಬಿ ವೃಂದದಲ್ಲಿ ಸಹಾಯಕ ಕೃಷಿ ನಿರ್ದೇಶಕರು 66 ಹುದ್ದೆ, ಕೃಷಿ ಅಧಿಕಾರಿಗಳು 350 ಹುದ್ದೆ, ಸಹಾಯಕ ಕೃಷಿ ಅಧಿಕಾರಿಗಳು 157 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದೆ. ಗ್ರೂಪ್-ಸಿ ವೃಂದದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಹಾಗೂ ಮುಂಬಡ್ತಿ ಕೋಟಾದಡಿ ಖಾಲಿ ಇರುವ ಹುದ್ದೆಗಳನ್ನು ನಿಯಮಾನುಸಾರ ಬಡ್ತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಉತ್ತರಿಸಿದರು.
PublicNext
07/12/2020 06:00 pm