ಬ್ರಿಟನ್ ಪ್ರಧಾನಿ ರೇಸ್‌ನ ಮುಂಚೂಣಿಯಲ್ಲಿರುವ ರಿಷಿ ಸುನಕ್ ಈಗ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಇಂಗ್ಲೆಂಡಿನ ಹಲವಡೆ ಕ್ಷಾಮದ ಪರಿಸ್ಥಿತಿ ಉಂಟಾಗಿದ್ದು, ಈ ಮಧ್ಯೆಯೇ ರಿಷಿ ಸುನಕ್ ತಮ್ಮ ಮನೆಯಲ್ಲಿ 3.8 ಕೋಟಿ ರೂ. ವೆಚ್ಚದ ಈಜುಕೊಳ ನಿರ್ಮಿಸಿದ್ದಾರೆ ಎಂಬ ವರದಿಗೆ ಬ್ರಿಟನ್ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರ್ಥ್ ಯಾರ್ಕ್ ಶೈರ್‌ನಲ್ಲಿನಲ್ಲಿರುವ ತನ್ನ ಬಂಗಲೆಯಲ್ಲಿ ಸುನಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು, ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾರಾಂತ್ಯದ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ. ಇದಲ್ಲದೇ ಈ ಬಂಗಲೆಯಲ್ಲಿ ಟೆನಿಸ್ ಕೋರ್ಟ್ ಮತ್ತು ಜಿಮ್ ಸಹ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದೆ.
ಡ್ರೋನ್ ಮೂಲಕ ಈಜುಕೊಳದ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವುದು ದೃಢಪಟ್ಟಿದೆ ಎಂದು ವರದಿ ಬಹಿರಂಗ ಪಡಿಸಿದೆ. ಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಖರ್ಚು ಮಿತಗೊಳಿಸಲು ನಗರದಲ್ಲಿನ ಸಾರ್ವಜನಿಕ ಈಜುಕೊಳವನ್ನು ಮುಚ್ಚಿರುವ ಸಂದರ್ಭದಲ್ಲಿ ಜನಪ್ರತಿನಿಧಿಯೊಬ್ಬರು ಈ ರೀತಿ ಮಾಡುತ್ತಿರುವುದು ಸರಿಯೇ ಎಂದು ಬ್ರಿಟನ್ ನಾಗರಿಕರು ಪ್ರಶ್ನಿಸಿದ್ದಾರೆ.
PublicNext
16/08/2022 11:00 pm