ನವದೆಹಲಿ: ಕಾಶ್ಮೀರದಲ್ಲಿ ಭಾರತ ಅಭಿವೃದ್ಧಿ ಕಾಮಗಾರಿ ನಡೆಸಿದರೆ ಪಕ್ಕದ ಪಾಕಿಸ್ತಾನಕ್ಕೆ ಹೊಟ್ಟೆಯೊಳಗೆ ಸಂಕಟ ಆಗುತ್ತಂತೆ. ಇಷ್ಟು ದಿನ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ, ಇದೀಗ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲೂ ತನ್ನ ಬುದ್ಧಿ ತೋರಿಸಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಚೆನಾಬ್ ನದಿ ನೀರನ್ನು ಬಳಸಿಕೊಂಡು ಆರಂಭಿಸುವ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕ್ ಪ್ರಧಾನಿ ಶಹಬಾಜ್ ಷರೀಫ್, "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾಶ್ಮೀರ ಭೇಟಿ ಮತ್ತು ವಿವಿಧ ಜಲವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾಮಗಾರಿಗಳು ಸಿಂಧು ನದಿ ಒಪ್ಪಂದದ ಆಶಯವನ್ನು ಉಲ್ಲಂಘಿಸಿವೆ. ಇದು ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ, ಸಾಮಾನ್ಯ ಸ್ಥಿತಿ ನೆಲೆಗೊಂಡಿದೆ ಎಂದು ಬಿಂಬಿಸುವ ಭಾರತದ ಹತಾಶ ಪ್ರಯತ್ನ" ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಕಾಶ್ಮೀರ ಭೇಟಿಯನ್ನು ಟೀಕಿಸಿರುವ ಪಾಕಿಸ್ತಾನ, ಇದು ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದದ ನೇರ ಉಲ್ಲಂಘನೆ, "ಭಾರತದ ಪ್ರಧಾನಿಯವರು ಎರಡು ಯೋಜನೆಗಳ ಶಂಕುಸ್ಥಾಪನೆಯನ್ನು ಪಾಕಿಸ್ತಾನವು 1960 ರ ಸಿಂಧೂ ಜಲ ಒಪ್ಪಂದದ (IWT) ನೇರ ಉಲ್ಲಂಘನೆ ಎಂದು ಪರಿಗಣಿಸುತ್ತದೆ" ಎಂದು ಆರೋಪಿಸಿದೆ. ಕಾಶ್ಮೀರ ಸಮಸ್ಯೆನ್ನು ಮರೆಮಾಚಲು ಭಾರತ ಕೈಗೊಂಡಿರುವ ಇಂತಹ ಹತಾಶ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯ ಸಾಕ್ಷಿಯಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಟೀಕಿಸಿದೆ.
"ಭಾರತವು ವಿನ್ಯಾಸಗೊಳಿಸಿದಂತೆ ರಾಟಲ್ ಜಲವಿದ್ಯುತ್ ಸ್ಥಾವರದ ನಿರ್ಮಾಣವು ಪಾಕಿಸ್ತಾನದಿಂದ ವಿವಾದಕ್ಕೊಳಗಾಗಿದೆ ಮತ್ತು ಕ್ವಾರ್ ಜಲವಿದ್ಯುತ್ ಸ್ಥಾವರಕ್ಕಾಗಿ ಭಾರತವು ಪಾಕಿಸ್ತಾನದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದದ ಬಾಧ್ಯತೆಯನ್ನು ಇದುವರೆಗೆ ಪೂರೈಸಿಲ್ಲ" ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ. IWT ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಮತ್ತು IWT ಚೌಕಟ್ಟಿಗೆ ಹಾನಿಕಾರಕವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಪಾಕಿಸ್ತಾನವು ಭಾರತಕ್ಕೆ ಕರೆ ನೀಡುತ್ತದೆ ಎಂದು ಅದು ಹೇಳಿದೆ.
PublicNext
26/04/2022 06:11 pm