ಬೆಂಗಳೂರು: ಉಕ್ರೇನ್ ಯುದ್ಧಭೂಮಿಯಲ್ಲಿ ಸಿಲುಕಿದ ಸಾವಿರಾರು ಭಾರತೀಯರು ಪ್ರಾಣ ಭೀತಿಯಲ್ಲಿದ್ದಾರೆ. ಅವರೆಲ್ಲ ಈ ಅಸಹಾಯಕ ಸ್ಥಿತಿಗೆ ಬರಲು ಕೇಂದ್ರ ಸರ್ಕಾರದ ನಿರ್ಲಕ್ಷವೇ ಕಾರಣ. ಇದೇ ಕಾರಣದಿಂದ ಕನ್ನಡಿಗ ವಿದ್ಯಾರ್ಥಿ ನವೀನ್ ಪ್ರಾಣ ತೆತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನರೇಂದ್ರ ಮೋದಿ ಸರ್ಕಾರ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೂ ಗಂಗಾ ನದಿಯ ಹೆಸರಿಟ್ಟು ಅದನ್ನು ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಬಳಸಲು ಹೊರಟಿದೆ. ಇದು ಅವರ ರಾಜಕೀಯದ ದುರ್ಬುದ್ಧಿಗೆ ಸಾಕ್ಷಿ ಎಂದಿದ್ದಾರೆ. ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಈಡಾಗಿರುವ ಭಾರತೀಯರು ಮುಖ್ಯವಾಗಿ ವಿದ್ಯಾರ್ಥಿಗಳು ಸಾವು-ಬದುಕಿನ ಹೋರಾಟ ನಡೆಸಲು ಕೇಂದ್ರದ ಬೇಜವಾಬ್ದಾರಿಯೇ ಕಾರಣ. ಕಳೆದ ಕೆಲವು ತಿಂಗಳುಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯಾವುದೇ ಕ್ಷಣದಲ್ಲಿ ಯುದ್ಧ ಸ್ಫೋಟವಾಗಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ದೇಶಗಳು ಅಲ್ಲಿರುವ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸು ಕರೆಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿತ್ತು. ಆದರೆ ಭಾರತ ಮಾತ್ರ ಯುದ್ಧ ಶುರುವಾಗುವವರೆಗೆ ಭಾರತೀಯರ ಸುರಕ್ಷತೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ತನ್ನನ್ನು ವಿಶ್ವಗುರು ಎಂದು ಕೊಂಡಾಡುತ್ತಾ ಭಕ್ತರು ನಡೆಸುತ್ತಿರುವ ಬಹುಪರಾಕ್ ಭಜನೆಗೆ ಪ್ರಧಾನಿಯವರು ತಲೆ ತೂಗುತ್ತಾ ಕಾಲಹರಣ ಮಾಡಿದರೇ ವಿನಾ ಯುದ್ಧಗ್ರಸ್ತ ಉಕ್ರೇನ್‌ನಲ್ಲಿರುವ ಸಾವಿರಾರು ಭಾರತೀಯರ ಸುರಕ್ಷತೆ ಬಗ್ಗೆ ಗಮನ ನೀಡಲೇ ಇಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
PublicNext
03/03/2022 08:08 am