ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಗರಕ್ಕೆ ತಾಲಿಬಾನ್ ಉಗ್ರರು ಅಡಿ ಇಡುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಸದ್ಯ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಮಧ್ಯೆ ನಾನು ದೇಶದ ‘ಕಾನೂನುಬದ್ಧ’ ಉಸ್ತುವಾರಿ ಅಧ್ಯಕ್ಷ ಎಂದು ಆಫ್ಘಾನ್ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಪ್ರತಿಪಾದಿಸುತ್ತಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅಫ್ಘಾನಿಸ್ತಾನ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, "ಅಫ್ಘಾನಿಸ್ತಾನದ ಸಂವಿಧಾನದ ಪ್ರಕಾರ ಅಧ್ಯಕ್ಷರ ಗೈರು, ಪಲಾಯನ, ರಾಜೀನಾಮೆ ಅಥವಾ ಸಾವಿನ ನಂತರ ಉಪಾಧ್ಯಕ್ಷರು ಅಧ್ಯಕ್ಷರಾಗಿ ಭಡ್ತಿ ಹೊಂದುತ್ತಾರೆ. ಸದ್ಯ ನಾನು ದೇಶದ ಒಳಗೇ ಇದ್ದೇನೆ ಮತ್ತು ನಾನು ಈಗ ದೇಶದ ಉಸ್ತುವಾರಿ ಅಧ್ಯಕ್ಷನಾಗಿದ್ದೇನೆ. ನಾನು ಎಲ್ಲ ನಾಯಕರನ್ನೂ ಸಂಪರ್ಕಿಸಿ ಅವರ ಬೆಂಬಲ ಹಾಗೂ ಒಮ್ಮತ ಸಂಗ್ರಹಿಸುತ್ತಿದ್ದೇನೆ ಎಂದಿದ್ದಾರೆ.
ಕಾಬೂಲ್ ಆಕ್ರಮಣದ ಬಳಿಕ, ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಶಾಂತಿ ಮಂಡಳಿ ಮುಖ್ಯಸ್ಥ ಅಬ್ದುಲ್ಲಾ ಸೇರಿದಂತೆ ಆಫ್ಘಾನ್‌ನ ನಾಯಕರೆಲ್ಲರೂ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
PublicNext
17/08/2021 10:53 pm