ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವಾಗಿ ವಿದೇಶಿ ಸೆಲೆಬ್ರಿಟಿಗಳು ಹಾಗೂ ಜನ ಪ್ರತಿನಿಧಿಗಳು ಮಾತು ಮುಂದುವರಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಮುಂದುವರಿದಿದೆ.
ರೈತರ ಹೋರಾಟ ದೇಶದ ಆಂತರಿಕ ವಿಚಾರ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಅದನ್ನು ಕೇಳಿಸಿಕೊಳ್ಳೋಕೆ ಪಿತೂರಿದಾರರು ತಯಾರಿಲ್ಲ. ಬದಲಿಗೆ ನಾಲಗೆ ಹರಿಬಿಡುವುದನ್ನು ಮುಂದುವರಿಸಿದ್ದಾರೆ. ಅದರಲ್ಲೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ, ವಕೀಲೆ ಮೀನಾ ಹ್ಯಾರೀಸ್ ಮಾಡುತ್ತಿರುವ ಟ್ವೀಟ್‍ಗಳು ಭಾರತದ ಘನತೆಗೆ ಮಸಿ ಬಳಿಯುವಂತಿವೆ.
ಟ್ವೀಟ್ ಮಾಡಿರುವ ಮೀನಾ ಹ್ಯಾರೀಸ್, ಇದು ಕೇವಲ ಕೃಷಿ ನೀತಿ ವಿಚಾರವಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ, ಪೊಲೀಸ್ ಹಿಂಸೆ, ರಾಷ್ಟ್ರೀಯ ಭಯೋತ್ಪಾದನೆ, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದ್ದು. ನಿಮ್ಮ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ. ಇವೆಲ್ಲವೂ ನಮ್ಮ ಸಮಸ್ಯೆಗಳೇ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
''ಸಿಂಘು ಗಡಿಯಲ್ಲಿ ಬಂಧಿತರಾಗಿದ್ದ ನೊದೀಪ್ ಕೌರ್ ಎಂಬ ದಲಿತ ಕಾರ್ಯಕರ್ತೆಗೆ ಪೊಲೀಸ್ ಕಸ್ಟಡಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. 20 ದಿನಗಳಿಂದ ಕೋರ್ಟ್‌ಗೆ ಹಾಜರುಪಡಿಸದೇ ಹಿಂಸೆ ನೀಡಲಾಗುತ್ತಿದೆ. ಭಾರತದಲ್ಲಿ ದಮನಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ''ದೇಶದ್ರೋಹಿಗಳ ಒಂದು ಗುಂಪು ರೈತರ ಹಿಂದೆ ನಿಂತು ವ್ಯವಸ್ಥಿತ ಷಡ್ಯಂತ್ರ್ಯ ನಡೆಸಿದೆ'' ಎಂದು ದೂರಿದ್ದಾರೆ.
PublicNext
06/02/2021 11:26 pm