ಕಾರವಾರ: 'ಇನ್ನೊಂದು 8-10 ದಿನದಲ್ಲಿ ಜಿಲ್ಲೆಗೆ ಮತ್ತೆ ಬರ್ತೀನಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಪರಿಶೀಲಿಸಿ ಚಾಲನೆ ಕೊಡುವ ಕೆಲಸ ಮಾಡ್ತೀನಿ’ .... ಉತ್ತರ ಕನ್ನಡ ಜಿಲ್ಲೆಯ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಗಿಗೆ ಪ್ರತಿಕ್ರಿಯೆಯಾಗಿ ನಾಡದೊರೆ ಸಿಎಂ ಬಸವರಾಜ ಬೊಮ್ಮಾಯಿ ಈ ಭರವಸೆ ನೀಡಿದ್ರು. ಆಗಸ್ಟ್ 3ರಂದು ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದ ಧರೆ ಕುಸಿತ ಪ್ರದೇಶಕ್ಕೆ ತುರ್ತು ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಈ ಭರವಸೆಯ ಉತ್ತರವನ್ನ ಸಿಎಂ ನೀಡಿದ್ದರು.
ಅಂದಹಾಗೆ, ಚಿಕಿತ್ಸೆಗೆಂದು ಉಡುಪಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಹೊನ್ನಾವರ ಮೂಲದ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದರು. ಇದಾದ ಬಳಿಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೂಗು ಜೋರಾಗಿದ್ದು, ಟ್ವಿಟರ್ ಅಭಿಯಾನ, ರಕ್ತಪತ್ರ ಚಳುವಳಿ, ಬೃಹತ್ ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟವನ್ನ ನಡೆಸುವ ಮೂಲಕ ಸರ್ಕಾರವನ್ನ ಎಚ್ಚರಿಸುವ ಕಾರ್ಯಕ್ಕೆ ಜನರು ಮುಂದಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಂತೆ ಖುದ್ದು ಮುಖ್ಯಮಂತ್ರಿಗಳೇ ಜಿಲ್ಲೆಗೆ ಆಗಮಿಸಿ ಆಸ್ಪತ್ರೆ ಘೋಷಣೆ ಮಾಡುವ ಭರವಸೆ ನೀಡಿದ್ದರಾದರೂ ಇದೀಗ ಕೊಟ್ಟ ಮಾತನ್ನೇ ಮರೆತಿದ್ದಾರೆ. ಜಿಲ್ಲೆಯಲ್ಲಿ ಎದ್ದಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೂಗನ್ನ ಹತ್ತಿಕ್ಕುವ ಉದ್ದೇಶದಿಂದ ಜನಪ್ರತಿನಿಧಿಗಳು ಸಿಎಂ ಕರೆಸುವುದಾಗಿ ಹೇಳಿ ಇದೀಗ ಸುಮ್ಮನಾಗಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಆಡಳಿತ ಪಕ್ಷ ಬಿಜೆಪಿಯ ಮುಖಂಡರನ್ನ ಕೇಳಿದ್ರೆ, ಸಿಎಂ ಬಿಡುವಿಲ್ಲದ ಕೆಲಸದ ನಡುವೆ ಕಾರಣಾಂತರಗಳಿಂದ ಉತ್ತರಕನ್ನಡ ಭೇಟಿಗೆ ಸಮಯಾವಕಾಶ ಸಿಗದಂತಾಗಿದೆ. ಮುಖ್ಯಮಂತ್ರಿಗಳೇ ಒಮ್ಮೆ ಭರವಸೆ ಕೊಟ್ಟ ಮೇಲೆ ಆ ಪ್ರಕಾರ ನಡೆದುಕೊಳ್ಳುತ್ತಾರೆ ಎನ್ನುವ ಭರವಸೆ ಇದೆ ಎನ್ನುತ್ತಿದ್ದಾರೆ.
ಆದರೆ, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಜನರು ಕೂಗಿಗೆ ಸಿಎಂ ಸಿಹಿ ಸುದ್ದಿ ಕೊಡುತ್ತಾರೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಈಗಲಾದರೂ ಮುಖ್ಯಮಂತ್ರಿಗಳಿಗೆ ಕೊಟ್ಟ ಭರವಸೆ ನೆನಪಾಗುತ್ತಾ, ಉತ್ತರ ಕನ್ನಡಕ್ಕೆ ಬಂದು ಆಸ್ಪತ್ರೆಯ ಕುರಿತು ಏನಾದರೂ ಮಾತ್ನಾಡ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.
PublicNext
08/09/2022 02:01 pm