ಬೆಂಗಳೂರು: ಬೆಂಗಳೂರಿನಲ್ಲಿನ ಮಳೆ ಪರಿಸ್ಥಿತಿ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಜಲಮಂಡಳಿ, ರಾಜ್ಯ ಮಳೆ ಹಾಗೂ ಪ್ರವಾಹದ ಹಾನಿ ಕುರಿತು ಸಚಿವರು, ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮತ್ತು ರಾಜ್ಯದ ಪ್ರವಾಹ ನಿರ್ವಹಣೆಗೆ, ವಿಶೇಷವಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಶಾಲಾ ಕೊಠಡಿ ದುರಸ್ತಿ ಸೇರಿದಂತೆ ಮೂಲಸೌಲಭ್ಯದ ನಿರ್ವಹಣೆಗೆ ರಾಜ್ಯ ಸರ್ಕಾರ 600 ಕೋಟಿ ರೂ.ಗಳ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿಗೆ 300 ರೂ.ಗಳನ್ನು ನೀಡಲಾಗಿದ್ದು, 664 ಕೋಟಿ ಡಿ.ಸಿಗಳ ಬಳಿ ಇದ್ದು, ಮೂಲಭೂತ ಸೌಕರ್ಯಕ್ಕೆ 500 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, 1500 ಕೋಟಿ ರೂ.ಗಳನ್ನು ರಾಜಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ನೀಡಲಾಗಿದ್ದು, ಮಳೆ ನಿಂತ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದರು.
*ಬೆಂಗಳೂರು ನಗರಕ್ಕೆ ಪ್ರತ್ಯೇಕ ಎಸ್‌ಡಿಆರ್‌ಎಫ್ ಕಂಪನಿ
ಬೆಂಗಳೂರಿನ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿ ಬೆಂಗಳೂರಿನಲ್ಲಿ ಒಂದು ಎಸ್‌ಡಿಆರ್‌ಎಫ್ ಕಂಪನಿಯನ್ನು ಸ್ಥಾಪಿಸಲು , ಸಲಕರಣೆಗಳನ್ನು ಒದಗಿಸಲು 9.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಎಸ್‌ಡಿಆರ್‌ಎಫ್ ಕಂಪನಿ ಬೆಂಗಳೂರಿಗೆ ಸೀಮಿತವಾಗಿ ಕೆಲಸ ಮಾಡಲಿದೆ. ಇಡೀ ರಾಜ್ಯದಲ್ಲಿ ಮಾಜಿ ಯೋಧರನ್ನು ಒಳಗೊಂಡಂತೆ ಇನ್ನೆರಡು ಕಂಪನಿಗಳನ್ನು ಮುಂದಿನ ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದರು.
PublicNext
06/09/2022 10:47 am