ದಾವಣಗೆರೆ: ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯ, ತಾರತಮ್ಯ ಹಾಗೂ ನಿರ್ಲಕ್ಷ್ಯ ವಿರೋಧಿಸಿ ವಿಪಕ್ಷ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಬೀಗ ಹಾಕುವ ಯತ್ನ ಮಾಡಿದರು. ಈ ವೇಳೆ ಪಾಲಿಕೆ ಮುಂಭಾಗ ಹೈಡ್ರಾಮವೇ ನಡೆಯಿತು.
ಪಾಲಿಕೆ ಮೇಯರ್, ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಘೋಷಣೆ ಹಾಕಿದ ಪ್ರತಿಭಟನಾಕಾರರು ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ಪಾಲಿಕೆಗೆ ಹೋಗುವ ಗೇಟ್ ಗೆ ಬೀಗ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟುಬಿಡದ ಪ್ರತಿಭಟನಾಕಾರರು ಮತ್ತೆ ಬೀಗ ಹಾಕಲು ಮುಂದಾದರು. ಇದನ್ನು ಪೊಲೀಸರು ತಡೆದರು.
ಕರೆ ಮಾಡಿದರೆ ಸ್ವೀಕರಿಸದ ಮೇಯರ್ ಜಯಮ್ಮ ಗೋಪಿನಾಯ್ಕ್ ಅವರಿಗೆ ಮೊಬೈಲ್ ಫೋನ್ ನೀಡುತ್ತಿದ್ದೇವೆ. ಇನ್ನು ಮುಂದಾದರೂ ಕರೆ ಸ್ವೀಕರಿಸಿ ಜನರ ಕಷ್ಟ ಆಲಿಸಲಿ. ವಾರ್ಡ್ ನ ಜನರು ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್ ಸದಸ್ಯರ ಬಳಿ ಕಷ್ಟ ಹೇಳಿಕೊಳ್ಳುತ್ತಿದ್ದಾರೆ. ಸ್ಪಂದಿಸುವ ಕಾರ್ಯ ಮಾಡದ ಮೇಯರ್‌ಗೆ ನಮ್ಮ ಧಿಕ್ಕಾರ ಇದೆ. ಇದು ಹೀಗೆ ಮುಂದುವರೆದರೆ ಜನರೇ ರೊಚ್ಚಿಗೇಳುತ್ತಾರೆ ಎಂದು ವಿಪಕ್ಷ ನಾಯಕರು, ಕಾಂಗ್ರೆಸ್ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
PublicNext
08/07/2022 05:20 pm