ನವದೆಹಲಿ : ಮುಂದಿನ ಮೂರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಟೋಲ್ ಸಂಗ್ರಹಣಾ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು "60 ಕಿಮೀ ಅಂತರದಲ್ಲಿ ಕೇವಲ ಒಂದು ಟೋಲ್ ಸಂಗ್ರಹವಿರುತ್ತದೆ" ಎಂದಿದ್ದಾರೆ.
ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷದ ಬಜೆಟ್ ನಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳ ಹಂಚಿಕೆಯಲ್ಲಿ ರಸ್ತೆಗಳ ಕುರಿತು ಮಾತನಾಡಿದ ಅವರು, ದೆಹಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇ ಸಿದ್ಧವಾಗುತ್ತಿದೆ. ದೆಹಲಿ-ಅಮೃತಸರ ವಿಭಾಗವು ಈ ವರ್ಷದ ಅಂತ್ಯದೊಳಗೆ ಒಳಗೆ ಪೂರ್ಣಗೊಳ್ಳಲಿದೆ.
ಶ್ರೀನಗರ-ಜಮ್ಮು ರಸ್ತೆಯು ಮುಂಬರುವ ಕತ್ರಾ-ಅಮೃತಸರ-ದೆಹಲಿ ರಸ್ತೆಯನ್ನು ಸೇರುವ ಕೊಂಡಿಯಾಗಿದ್ದು ಇಲ್ಲಿ ತಡೆರಹಿತ ಸಂಪರ್ಕಕ್ಕೆ ಅನುಮತಿ ನೀಡಲಾಗಿದೆ. ಈ ರಸ್ತೆಯ ಮೂಲಕ, ಶ್ರೀನಗರದಿಂದ ಮುಂಬೈಗೆ 20 ಗಂಟೆಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.
2024 ರ ವೇಳೆಗೆ ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ 11,650 ಅಡಿ ಎತ್ತರದ ಜೊಜಿ ಲಾ ಅಡಿಯಲ್ಲಿ ಸುರಂಗ ಮಾರ್ಗದ ತೆರೆಯುವ ಗುರಿ ಹೊಂದಿರುವುದಾಗಿ ಸಚಿವರು ಹೇಳಿದರು.
ಇನ್ನು ದೇಶದಲ್ಲಿ ವಾರ್ಷಿಕ ಸುಮಾರು 1.50 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು ಇದರಲ್ಲಿ ಯುವ ಜನರೇ ಹೆಚ್ಚಿದ್ದಾರೆ. ಹಾಗಾಗಿ ರಸ್ತೆ ಅಭಿವೃದ್ಧಿಯಲ್ಲಿ ಬದಲಾವಣೆ ತರಲು ಸರ್ಕಾರ ವಿಶ್ವಬ್ಯಾಂಕ್ ನೊಂದಿಗೆ ಕೆಲಸ ಮಾಡುತ್ತಿದೆ. ಈಗಾಗಲೇ ವಿಶ್ವಬ್ಯಾಂಕ್ ತಮಿಳುನಾಡು ಸರ್ಕಾರದೊಂದಿಗೆ ಕೆಲಸ ಮಾಡಿದೆ. ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಅವರು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದಾರೆ. ಹಾಗಾಗಿ ನಾವು ಕೂಡಾ ತಮಿಳುನಾಡು ಮಾದರಿಯನ್ನು ಜಾರಿಗೆ ತರಲು ನೋಡುತ್ತಿದ್ದೇವೆ ಎಂದರು.
PublicNext
22/03/2022 06:59 pm