ಅಮರಾವತಿ : ಅಪರೂಪದ ಗೌಚರ್ ಕಾಯಿಲೆಯಿಂದ ಬಳಲುತ್ತಿರುವ ಎರಡೂವರೆ ವರ್ಷದ ಬಾಲಕಿಯ ಚಿಕಿತ್ಸೆಗಾಗಿ ಆಂಧ್ರಪ್ರದೇಶ ಸರ್ಕಾರ 1 ಕೋಟಿ ರೂಪಾಯಿ ಮಂಜೂರು ಮಾಡಿದೆ.
ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲಾಧಿಕಾರಿ ಹಿಮಾಂಶು ಶುಕ್ಲಾ ಅವರು ಬಾಲಕಿಯ ಚಿಕಿತ್ಸೆಗಾಗಿ 13 ಚುಚ್ಚುಮದ್ದುಗಳ ಮೊದಲ ಸೆಟ್ ಅನ್ನು ಭಾನುವಾರ ಬಾಲಕಿಯ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಒಟ್ಟಾರೆಯಾಗಿ, ಪುಟ್ಟ ಬಾಲಕಿಗೆ ಚಿಕಿತ್ಸೆಗಾಗಿ ಕನಿಷ್ಠ 52 ಚುಚ್ಚುಮದ್ದುಗಳನ್ನು ನೀಡಬೇಕು. ಪ್ರತಿಯೊಂದು ಚುಚ್ಚುಮದ್ದಿಗೂ 1.25 ಲಕ್ಷ ವೆಚ್ಚವಾಗುತ್ತದೆ.
ಗೌಚರ್ ಕಾಯಿಲೆಯು ಕೊಬ್ಬಿನ ಪದಾರ್ಥಗಳ ರಚನೆಯಿಂದಾಗಿ ವ್ಯಕ್ತಿಯ ಮೂಳೆಗಳು ಮತ್ತು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ.
ಇದು ಅಂಗಗಳ ವಿಸ್ತರಣೆಗೆ ಕಾರಣವಾಗುತ್ತದೆ. ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದ ಕುಟುಂಬವು ಇತ್ತೀಚೆಗೆ ಕೋನಸೀಮೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೆರವು ನೀಡುವಂತೆ ಮನವಿ ಮಾಡಿತ್ತು.
ಬಾಲಕಿಯ ಚಿಕಿತ್ಸೆಗೆ ಮಾತ್ರವಲ್ಲದೆ ಆಕೆಯ ಶಿಕ್ಷಣ ಮತ್ತು ಯೋಗಕ್ಷೇಮಕ್ಕೂ ಹಣ ಮಂಜೂರು ಮಾಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅಗತ್ಯವಿರುವ ಹಣದ ಕುರಿತು ಸರ್ಕಾರಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಗೌಚರ್ ಕಾಯಿಲೆ ಚಿಕಿತ್ಸೆಗೆ 1 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬಾಲಕಿಯ ಚಿಕಿತ್ಸೆಗಾಗಿ ಹಿಮಾಂಶು ಶುಕ್ಲಾ ಅವರು ಅಮಲಾಪುರಂನ ಸರ್ಕಾರಿ ಏರಿಯಾ ಆಸ್ಪತ್ರೆಯಲ್ಲಿ ವೈದ್ಯರಿಗೆ ಚುಚ್ಚುಮದ್ದನ್ನು ಹಸ್ತಾಂತರಿಸಿದ್ದಾರೆ. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಭಾರತದಲ್ಲಿ 14 ಮಕ್ಕಳು ಇಂತಹ ಕಾಯಿಲೆಯಿಂದ ಬಳಲುತ್ತಿದ್ದು,
ಈ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ದೇಶದ ಮೊದಲ ಸರ್ಕಾರಿ ಆಸ್ಪತ್ರೆ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ಬಾಲಕಿಯ ಕುಟುಂಬಕ್ಕೂ ಮಾಸಿಕ ಪಿಂಚಣಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
PublicNext
03/10/2022 12:14 pm