ಸಿಯೋನಿ: ರಸ್ತೆ ಬದಿ ಸುಟ್ಟ ಮೆಕ್ಕೆಜೋಳ ಮಾರಾಟ ಮಾಡುವ ವ್ಯಾಪಾರಿಯೊಂದಿಗೆ ಕೇಂದ್ರ ಸಚಿವರೊಬ್ಬರು ಚೌಕಾಶಿ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಸಂಗತಿಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಇದರ ವಿಡಿಯೋ ನೋಡಿದ ನೆಟ್ಟಿಗರು ಸಚಿವರಿಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಹೌದು. ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಫಗ್ಗಾನ್ ಸಿಃಂಗ್ ಕುಲಸ್ತೆ ಅವರು ಸದ್ಯ ನಗೆಪಾಟಲಿಗೀಡಾಗಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಮಂಡಲಾ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟ ಮೆಕ್ಕೆಜೋಳ ವ್ಯಾಪಾರಿಯನ್ನು ಕಂಡು ವಾಹನ ನಿಲ್ಲಿಸಿದ್ದಾರೆ. ಹಾಗೂ ಸುಟ್ಟ ಮೆಕ್ಕೆಜೋಳಕ್ಕೆ 15ರೂ. ಬೆಲೆ ಎಂಬುದನ್ನು ತಿಳಿದ ಕೇಂದ್ರ ಸಚಿವ ಫಗ್ಗಾನ್ ಸಿಂಗ್ 'ಇಷ್ಟೊಂದು ಬೆಲೆ ಯಾಕಪ್ಪ?' ಎಂದು ಚೌಕಾಶಿ ಮಾಡಿದ್ದಾರೆ. ಆಗ ವ್ಯಾಪಾರಿ ಸಚಿವರ ಮುಂದೆ ನಗುತ್ತಲೇ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಡುಗೆ ಸಿಲಿಂಡರ್ ಬೆಲೆ ಸಾವಿರ ಗಡಿ ದಾಟಿದೆ. ಪೆಟ್ರೋಲ್ ಬೆಲೆ 110ರೂ ಮೇಲ್ಪಟ್ಟು ಇದೆ. ಈ ನಡುವೆ ಕೇಂದ್ರ ಸಚಿವರಾದ ತಮಗೆ ಸುಟ್ಟ ಮೆಕ್ಕೆಜೋಳದ ಬೆಲೆ ಈ ಮಟ್ಟಕ್ಕೆ ಹೆಚ್ಚಳ ಎನಿಸಿದರೆ ಬೆಲೆ ಏರಿಕೆಯಿಂದ ಕಂಗಾಲಾದ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಫಗ್ಗಾನ್ ಸಿಂಗ್ ನಾವು ಸ್ಥಳೀಯ ರೈತರು ಹಾಗೂ ವ್ಯಾಪಾರಿಗಳನ್ನು ಉಳಿಸಬೇಕಾದರೆ ಸ್ಥಳೀಯ ಖಾದ್ಯ-ತಿನಿಸುಗಳನ್ನು ಖರೀದಿಸಬೇಕು. ಇದರಿಂದ ನಿರುದ್ಯೋಗವೂ ನಿವಾರಣೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
PublicNext
23/07/2022 06:20 pm