ದಾವಣಗೆರೆ: ಗ್ರಾಮೀಣಾಭಿವೃದ್ಧಿಯ ಕನಸು ಹೊತ್ತು ಅಮೆರಿಕದ ಸಾಫ್ಟ್ ವೇರ್ ಕಂಪನಿಯಲ್ಲಿ ಇಂಜಿನಿಯರ್ ಕೆಲಸ ಬಿಟ್ಟ ಆ ಮಹಿಳೆ ವಾಪಸ್ ಊರಿಗೆ ಬಂದಿದ್ರು. ಈಗ ಅವರು ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿಯ ಚುಕ್ಕಾಣಿ ಹಿಡಿದಿದ್ದಾರೆ.
ಮೂವತ್ತೆರಡು ವರ್ಷದ ಆ ಸಾಫ್ಟ್‌ವೇರ್ ಎಂಜಿನಿಯರ್ ಸ್ವಾತಿ ತಿಪ್ಪೇಸ್ವಾಮಿ. ತಂದೆಯ ಇಷ್ಟದಂತೆ ಹಳ್ಳಿಗೆ ಆಗಮಿಸಿ, ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ತದ ನಂತರ ಕಳೆದ ಫೆ.8ರಂದು ನಡೆದ ಚುನಾವಣೆಯಲ್ಲಿ ಗ್ರಾಪಂಗೆ ಎರಡುವರೆ ವರ್ಷ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟೆಕ್ಕಿ ಸ್ವಾತಿ ಅವರು ಬೆಂಗಳೂರಿನ ಪಿಇಎಸ್‌ಐಟಿಯಲ್ಲಿ ಬಿಇ ಮಾಹಿತಿ ವಿಜ್ಞಾನ-ತಂತ್ರಜ್ಞಾನ ಓದಿದ್ದಾರೆ. ಆ ನಂತರ ಕಳೆದ ಐದು ವರ್ಷಗಳಿಂದ ಅಮೆರಿಕಾದಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ತಂದೆಯ ಒತ್ತಾಸೆ, ಗ್ರಾಮಾಭಿವೃದ್ಧಿಯ ಕನಸು ಸಾಕಾರಕ್ಕಾಗಿ ತವರೂರಿಗೆ ಆಗಮಿಸಿದ ಅವರು ಈಗ ಊರಿನ ಪಂಚಾಯತಿ ಅಧ್ಯಕ್ಷೆಯಾಗಿ ಹಳ್ಳಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದಾರೆ.
PublicNext
12/02/2021 12:00 pm