ಪಲಕ್ಕಾಡ್: ತನ್ನ ಬಲಗೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಛತ್ತೀಸ್ಗಢ ಮಹಿಳೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ಯೋಧ ವಿಕಾಸ್ ಅವರ ಪ್ರಾಣ ಉಳಿಸಿದ್ದ 30 ವರ್ಷದ ಜ್ಯೋತಿ ಅವರು ಕೇರಳದಲ್ಲಿ ಡಿಸೆಂಬರ್ 10ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಲಯಾಳಂ ಭಾಷೆ ಕಲಿತು ಸ್ಪಷ್ಟವಾಗಿ ಮಾತನಾಡುವ ಜ್ಯೋತಿ ಪಲಕ್ಕಾಡ್ ಜಿಲ್ಲೆಯ ಕೊಲ್ಲಂಗೊಡೆ ಬ್ಲಾಕ್ ಪಂಚಾಯಿತಿಯ ಪಲಥುಲ್ಲಿ ವಿಭಾಗದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮತದಾರರಿಂದಲೂ ಅವರಿಗೆ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ.
ಈ ಹಿಂದೆ ಆಗಿದ್ದೇನು?: 2010ರ ಜನವರಿ 3ರಂದು ಜ್ಯೋತಿ ಅವರು ಕಾಲೇಜು ಹಾಸ್ಟೆಲ್ನಿಂದ ಬಸ್ಸಿನಲ್ಲಿ ಪ್ರಯಾಣಿಸುವಾ ಮುಂದಿನ ಸೀಟಿನಲ್ಲಿ ಯೋಧ ವಿಕಾಸ್ ಕುಳಿತಿದ್ದರು. ವಿಕಾಸ್ ತಮ್ಮ ಸಹೋದರನನ್ನು ಭೇಟಿ ಮಾಡಿ ದಾಂತೇವಾಡ ಜಿಲ್ಲೆಯಲ್ಲಿದ್ದ ತಮ್ಮ ಕ್ಯಾಂಪ್ಗೆ ಬಸ್ನಲ್ಲಿ ಮರಳುತ್ತಿದ್ದರು. ಪ್ರಯಾಣದ ನಡುವೆಯೇ ನಿದ್ರೆಗೆ ಜಾರಿದ್ದ ವಿಕಾಸ್, ತಮ್ಮ ತಲೆಯನ್ನು ಕಿಟಕಿಯಿಂದ ಆಚೆಗೆ ಹಾಕಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡು ಬಸ್ಸಿನತ್ತ ನುಗ್ಗಿ ಬರುವುದನ್ನು ಜ್ಯೋತಿ ಗಮನಿಸಿದ್ದರು. ತಕ್ಷಣ ಹಿಂಬದಿ ಸೀಟಿನಿಂದ ಎದ್ದು, ಕಿಟಕಿಯಿಂದ ಹೊರ ಚಾಚಿದ್ದ ವಿಕಾಶ್ ತಲೆಯನ್ನು ಕಿಟಕಿಯಿಂದ ನೂಕಿದ್ದಾರೆ. ಹೀಗೆ ಮಾಡುವಾಗ ಜ್ಯೋತಿ ಬಲಗೈಗೆ ತೀವ್ರ ಪೆಟ್ಟಾಗಿ ಕೈ ಕಳೆದುಕೊಂಡಿದ್ದರು.
ತಮ್ಮ ಪ್ರಾಣ ಉಳಿಸಿದ ಜ್ಯೋತಿ ಅವರನ್ನು ವಿಕಾಸ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಜ್ಯೋತಿ, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮದುವೆಯಾಗಿ ಕೇರಳದಲ್ಲೇ ಬಂದು ನಲೆಸಿದ್ದಾರೆ.
PublicNext
07/12/2020 11:00 am