ಚಿತ್ರದುರ್ಗ : ಮಹಾಮಾರಿ ಕೊರೊನಾ ವೈರಸ್ ಒಂದು ಮತ್ತು ಎರಡನೇ ಅಲೆ ಸಾಕಷ್ಟು ಸಾವು ನೋವು ಪ್ರಕರಣಗಳು ಸಂಭವಿಸಿವೆ. ಇನ್ನು ತಜ್ಞರ ಪ್ರಕಾರ ಮೂರನೇ ಅಲೆ ಹರಡುವ ಮುನ್ಸೂಚನೆ ಇರುವುದರಿಂದ ಪೋಷಕರು ಮಕ್ಕಳ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 9 ಸಾವಿರ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ, ತೊಂದರೆಗೀಡಾದ ಬಡ ಕುಟುಂಬಗಳಿಗೆ ನಮ್ಮ ಸರ್ಕಾರದ ವತಿಯಿಂದ ಕಿಟ್ ವಿತರಣೆ ಮಾಡಲಾಗಿದೆ ಎಂದರು. ಹಿರಿಯೂರು ತಾಲ್ಲೂಕಿನಲ್ಲಿ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಆಡಳಿತ, ಸೇರಿದಂತೆ ಇತರೆ ಇಲಾಖೆಗಳು ಉತ್ತಮವಾಗಿ, ಕಾರ್ಯ ನಿರ್ವಹಿಸಿದ್ದರಿಂದ ನನ್ನ ಕ್ಷೇತ್ರದಲ್ಲಿ ಕೊರೋನಾ ಹೆಚ್ಚು ಹರಡದೆ, ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರ ಸಹಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ನೀರು ಹರಿದು ಬರುತ್ತಿದ್ದು, ಇಂದು ವಿವಿ ಸಾಗರದಲ್ಲಿ 104 ಅಡಿ ನೀರು ಇದೆ. 90 ಕೋಟಿ ವೆಚ್ಚದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸಲು ಸರ್ಕಾರದಿಂದ ಅನುಮೋದನೆ ದೊರೆತಿದೆ, ತಾಲ್ಲೂಕಿನ ಪಟ್ರೇಹಳ್ಳಿ ಬಳಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಭೂಮಿ ಪೂಜೆ ಅತೀ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದರು. ನಾನು ಶಾಸಕಳಾಗಿನಿಂದಲೂ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದರು. ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಸಾವಿರಾರು ಕಾರ್ಮಿಕರಿಗೆ ಲಸಿಕೆ ವಿತರಣೆ ಮಾಡಲಾಯಿತು. ಶಾಸಕರ ಕಾರ್ಯಕ್ರಮದಲ್ಲಿ ಯಾರಾದರೂ ಸಮಸ್ಯೆಗಳನ್ನು ಹೇಳಿಕೊಂಡು ಬಂದವರಿಗೆ ಸ್ಥಳದಲ್ಲೇ ಸ್ಪಂದಿಸುವ ಗುಣ ಶಾಸಕರಲ್ಲಿರುವುದು ವಿಶೇಷವಾಗಿದೆ ಎನ್ನಬಹುದು.
ಇಂದು ರಾಕಿ ಹಬ್ಬದ ಹಿನ್ನೆಲೆಯಲ್ಲಿ ವೇದಿಕೆ ಮೇಲೆ ಇದ್ದವರಿಗೆ ರಾಕಿ ಕಟ್ಟಿ ಶುಭಕೋರಿದರು. ಇನ್ನೂ ದಾರಿಯಲ್ಲಿ ಕಾರ್ಮಿಕರು ತಲೆಯ ಮೇಲೆ, ಆಟೋ, ಬೈಕ್, ಟೆಂಪೋ ಇತರೆ ವಾಹನಗಳಲ್ಲಿ ಆಹಾರ ಕಿಟ್ ತೆಗೆದುಕೊಂಡು ಹೋಗುವ ದೃಶ್ಯ ಕಂಡು ಬಂದಿತು.
PublicNext
22/08/2021 01:45 pm