ಉಡುಪಿ: ಕೊರೊನಾ ಸಂದರ್ಭದಲ್ಲಿ ಮಂತ್ರಿ ಮಂಡಲ ರಚನೆಯಾಗಿದ್ದು, ಈ ಅವಧಿಯಲ್ಲಿ ಕೊರೋನಾ ನಿಯಮಾವಳಿ ಪಾಲಿಸಬೇಕಾದ ಜನಪ್ರತಿನಿಧಿಗಳಿಂದಲೇ ನಿಯಮ ಉಲ್ಲಂಘನೆಯಾಗಿದೆ. ಸಚಿವ ಸಂಪುಟ ರಚನೆಯಾದ ತಕ್ಷಣ ಕೊರೋನಾ ನಿರ್ವಹಣೆ ಮತ್ತು ನೆರೆ ಪರಿಹಾರ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಚಿವರನ್ನು ನಿಯೋಜನೆ ಮಾಡಿದರೆ, ನೂತನ ಸಚಿವರು ಅಭಿನಂದನೆ ಕಾರ್ಯಕ್ರಮ, ಮೆರವಣಿಗೆ ಇತ್ಯಾದಿಗಳ ಮೂಲಕ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ನವಲಗುಂದದ ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್. ಎಚ್. ಕೋನರೆಡ್ಡಿ ಹೇಳಿದ್ದಾರೆ.
ಉಡುಪಿಯ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬಿಜೆಪಿಗೆ ಬಹುಮತದ ಕೊರತೆ ಇಲ್ಲ. ಖಾತೆ ಹಂಚಿಕೆ, ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿದ್ದರೂ ಶಿಸ್ತಿನ ಪಕ್ಷವಾದ ಬಿಜೆಪಿ ಅದೆಲ್ಲವನ್ನೂ ನಿಭಾಯಿಸಲಿದೆ. ಬಿಜೆಪಿ ಆಂತರಿಕ ವಿಚಾರದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ಐದು ಬಾರಿ ಶಾಸಕರಾಗಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಖಾತೆ ನೀಡಬೇಕಿತ್ತು ಎಂದು ಕೋನರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬರುವ ಜಿ.ಪಂ. ಮತ್ತು ತಾ. ಪಂ. ಹಾಗೂ ಕೆಲವೆಡೆ ನಡೆಯುವ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.
ಉಡುಪಿ ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ನೇತೃತ್ವದಲ್ಲಿ ಪಕ್ಷ ಸಂಘಟಿಸಲಾಗುವುದು. 20 ಮಂದಿ ಹಿರಿಯ ನಾಯಕರ ತಂಡ ರಚಿಸಿ ಪಕ್ಷ ಬಲವರ್ಧನೆಗೆ ಪೂರಕ ಸಹಕಾರ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಇಕ್ಬಾಲ್ ಆತ್ರಾಡಿ, ಪಕ್ಷ ಪ್ರಮುಖರಾದ ಅಬ್ದುಲ್ ರಝಾಕ್ ಉಚ್ಚಿಲ, ರಂಗ ಕೋಟ್ಯಾನ್,ಪ್ರಕಾಶ್ ಶೆಟ್ಟಿ ಮೊದಲಾದವರಿದ್ದರು.
PublicNext
08/08/2021 01:36 pm