ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನ ಹಳ್ಳಿಯಲ್ಲಿ ನಡೆದ ಬೃಹತ್ ಸೇರ್ಪಡೆ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಸೀನಪ್ಪ, ಎಂ.ರವಿಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್ ನೇತೃತ್ವದ ಯಲಹಂಕ ಕ್ಷೇತ್ರದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೈ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ನಾಯಕತ್ವಕ್ಕಾಗಿ ತಿಕ್ಕಾಟ ಮುಂದುವರೆದಿದೆ. ಇಬ್ಬರ ನಡುವಿನ ತಿಕ್ಕಾಟದಲ್ಲಿ ಕಾರ್ಯಕರ್ತರು ದಾರಿ ಕಾಣದಂತಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಹಾಗಾಗಿ ಲಕ್ಷಾಂತರ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಮಾತನಾಡಿ, ಇದು ಹಿಂದೂ ರಾಷ್ಟ್ರ. ನಾವು ಸನಾತನ ಕಾಲದಿಂದಲೂ ಭಗವಂತನನ್ನು ನಂಬಿ ಬಂದಿರೋರು. ಕಾಂಗ್ರೆಸ್ ನಲ್ಲಿ ಯಾರ್ಯಾರು ಯಾರನ್ನು ಪೂಜೆ ಮಾಡ್ತಾರೆ ಎಂದು ಗಾಂಧಿ ಕುಟುಂಬವನ್ನು ಪೂಜಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ .ಆರ್. ವಿಶ್ವನಾಥ್, 2023ರ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಈಗಾಗಲೇ ತಂತ್ರಗಾರಿಕೆ ಆರಂಭಿಸಿದೆ ಎಂದರು. ಅವರು ಅನ್ಯಪಕ್ಷಗಳ ಸಾವಿರಾರು ಕಾರ್ಯಕರ್ತರನ್ನು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಎಸ್.ಆರ್. ವಿಶ್ವನಾಥ್, ನಿಕಟಪೂರ್ವ ಜಿಪಂ ಅಧ್ಯಕ್ಷ ಮರಿಸ್ವಾಮಿ, ಎಚ್.ಸೀನಪ್ಪ, ಆಲೂರು ರವಿಕುಮಾರ್, ಚೊಕ್ಕನಹಳ್ಳಿ ವೆಂಕಟೇಶ್ , ಮಂಡಲ ಅಧ್ಯಕ್ಷ ಹನುಮಯ್ಯ, ಬಿಜೆಪಿ ಮುಖಂಡರಾದ ಕೊಳ್ಳಿಗಾನಹಳ್ಳಿ ವೆಂಕಟೇಶ್, ಗೋವಿಂದಪ್ಪ, ದಿಬ್ಬೂರು ಜಯಣ್ಣ, ರಾಮಮೂರ್ತಿ, ಮಾಧ್ಯಮ ಸಂಚಾಲಕರಾದ ಅಭಿನಾಶ್ ಗಣೇಶ್, ಮುಕೇಶ್, ಅರುಣ್ ಕುಮಾರ್, ಜಿ.ಜೆ. ಮೂರ್ತಿ, ಸೋಮಶೇಖರ್, ಮಹಿಳಾ ಮೋರ್ಚಾದ ಪದ್ಮಾವತಿ ಉಪಸ್ಥಿತರಿದ್ದರು.
PublicNext
11/07/2022 05:19 pm