ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ನಾವು ಸತ್ತ ಮೇಲೆ ಬಿಲ್‌ ಕೊಡೋರಾ’; ಮೇವು ಸರಬರಾಜುದಾರರಿಂದ ಪ್ರಧಾನಿಗೆ ದೂರು

ಬೆಂಗಳೂರು: ರಾಜ್ಯದ ಗೋ ಶಾಲೆಗಳಿಗೆ ಹಸಿರು ಮೇವು ಮತ್ತು ಒಣ ಮೇವು ಸರಬರಾಜು ಮಾಡಿರುವ ಸರಬರಾಜುದಾರರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ 30-40 ಲಕ್ಷ ರು.ಗಳನ್ನು ಪಾವತಿಸಲು ಕಂದಾಯ ಇಲಾಖೆಯ ಅಧೀನದಲ್ಲಿರುವ ಜಿಲ್ಲಾಧಿಕಾರಿಗಳು ಮತ್ತು ಪಶುಪಾಲನೆ, ಪಶು ವೈದ್ಯ ಸೇವಾ ಇಲಾಖೆಯ ಉನ್ನತ ಅಧಿಕಾರಿಗಳು ಲಂಚ ಮತ್ತು ಕಮಿಷನ್‌ಗೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ದೂರು ಇದೀಗ ಪ್ರಧಾನಿ ಕಚೇರಿಗೆ ಸಲ್ಲಿಕೆಯಾಗಿದೆ.

ಶೇ.40ರಷ್ಟು ಕಮಿಷನ್‌ ನೀಡಲಾಗದೇ ಇದ್ದದ್ದಕ್ಕೆ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬೆನ್ನಲ್ಲೇ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಮಿಷನ್‌ ಮತ್ತು ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ದೂರು ಮುನ್ನೆಲೆಗೆ ಬಂದಿದೆ. ಸಚಿವ ಪ್ರಭು ಚೌಹ್ಹಾಣ್‌, ಅಶೋಕ್‌ ಮತ್ತು ಡಾ ಕೆ ಸುಧಾಕರ್‌ ಅವರು ಸಕಾಲದಲ್ಲಿ ಸರಬರಾಜುದಾರರಿಗೆ ನೆರವಿಗೆ ಧಾವಿಸದೇ ಇದ್ದಲ್ಲಿ ಸಂತೋಷ್‌ ಪಾಟೀಲ್‌ ಹಿಡಿದ ಹಾದಿಯನ್ನೇ ಹಿಡಿಯಬಹುದು ಎಂಬ ಎಚ್ಚರಿಕೆಯನ್ನೂ ಮೇವು ಸರಬರಾಜುದಾರರು ಪ್ರಧಾನಿಗೆ ನೀಡಿದ್ದಾರೆ.

ಹುಬ್ಬಳ್ಳಿ ಮೂಲದ ಹರ್ಷ ಅಸೋಸಿಯೇಟ್ಸ್‌ನ ಜಿ ಎಂ ಸುರೇಶ್‌ ಎಂಬುವರು 2022ರ ಏಪ್ರಿಲ್‌ 14ರಂದು ದೂರು ನೀಡಿದ್ದಾರೆ. ಪಶುಪಾಲನೆ, ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಕಮಿಷನ್‌ ದಾಹವನ್ನು ದೂರಿನಲ್ಲಿ ತೆರೆದಿಟ್ಟಿದ್ದಾರೆ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಸಚಿವ ಸುಧಾಕರ್‌ ಅವರ ವಿರುದ್ಧ ಗುರುತರವಾದ ಆರೋಪ ಮಾಡಿದ್ದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಗೋ ಶಾಲೆಗಳಿಗೆ ಮೇವು ಸರಬರಾಜು ಮಾಡಿ ಬಾಕಿ ಪಾವತಿಗೆ ಕಮಿಷನ್‌, ಲಂಚ ಕೇಳುತ್ತಿದ್ದಾರೆ ಎಂದು ಮೇವು ಸರಬರಾಜುದಾರ ಪ್ರಧಾನಿ ಕಚೇರಿಗೆ ನೀಡಿರುವ ದೂರಿಗೆ ಮಹತ್ವ ಬಂದಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಗೋಶಾಲೆಗಳಿಗೆ ಮೇವು ಸರಬರಾಜು ಮಾಡಿರುವ ಸರಬರಾಜುದಾರರು ಸಚಿವ ಪ್ರಭು ಚವ್ಹಾಣ್‌ ಮತ್ತು ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಹಲವು ಬಾರಿ ಪತ್ರ ಬರೆದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಸರಬರಾಜುದಾರರು ಒಬ್ಬೊಬ್ಬರಾಗಿ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳು ಮತ್ತು ಪಶುಪಾಲನೆ, ಪಶು ವೈದ್ಯ ಸೇವಾ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಲಂಚ ಅಥವಾ ಕಮಿಷನ್‌ ಹಣವನ್ನು ನೀಡದೇ ಇದ್ದಲ್ಲಿ ಸರಬರಾಜುದಾರರು ಪೂರೈಕೆ ಮಾಡಿದ್ದ ಹಸಿರು ಮೇವನ್ನು ಒಣ ಮೇವನ್ನಾಗಿ ನಿಯಮಬಾಹಿರವಾಗಿ ಪರಿವರ್ತಿಸುತ್ತಾರೆ. ಅಲ್ಲದೆ ಒಣ ಮೇವಿಗೆ ಬಾಕಿ ಹಣವನ್ನೂ ಚುಕ್ತಾ ಮಾಡುತ್ತಾರೆ ಎಂದು ಸರಬರಾಜುದಾರರೇ ಆರೋಪಿಸುತ್ತಾರೆ. ಮೇವು ಸರಬರಾಜುದಾರರು ಬೀದಿಗೆ ಬರುತ್ತಿರುವ ನಿದರ್ಶನಗಳು ಒಂದೊಂದಾಗಿ ಬಹಿರಂಗವಾಗುತ್ತಿದ್ದರೂ ಜಿಲ್ಲಾಡಳಿತ ಮತ್ತು ಸರ್ಕಾರವು ಮೈಮರೆತು ಕೂತಿದೆ.

ವಿಷ ತೆಗೆದುಕೊಳ್ಳುವ ಪರಿಸ್ಥಿತಿ ಇದೆ ಎಂದ ಸರಬರಾಜುದಾರ

ಪ್ರಧಾನಿ ಕಚೇರಿಗೆ ದೂರು ಸಲ್ಲಿಸುವ ಮುನ್ನವೇ ಈ ಸಂಬಂಧ 2020ರಿಂದಲೂ ಬಾಕಿ ಹಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲಿಳಿದು ಬಸವಳಿದು ಹೋಗಿರುವ ಜಿ ಎಂ ಸುರೇಶ್‌ ಎಂಬುವರು ‘ ಚಿಕ್ಕಬಳ್ಳಾಪುರದ ಜಿಲ್ಲೆಯ ದನಗಳಿಗೆ ತಿನ್ನೋಕೆ ಮೇವು ಪೂರೈಸಿ ಬಿಲ್‌ ಸಿಗದೇ ಜಿಲ್ಲಾಧಿಕಾರಿ ಕಚೇರಿಗೆ ಒಂದು ವರ್ಷದಿಂದ ಅಲೆದಾಡಿ ಈಗ ನಾವು ವಿಷ ತಗಳೋ ಪರಿಸ್ಥಿತಿ ಬಂದಿದೆ ಇಂತಹ ಬೇಜವಾಬ್ದಾರಿ ಅಧಿಕಾರಗಿಳಿಂದ,’ ಎಂದು ಟ್ವೀಟ್‌ ಕೂಡ ಮಾಡಿದ್ದರು. ಆದರೂ ಅಧಿಕಾರಿಗಳು ಈ ಬಗ್ಗೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂಬುದು ಗೊತ್ತಾಗಿದೆ.

ನಾವು ಸಾಯಬೇಕಾ…ಸತ್ತ ಮೇಲೆ ಬಿಲ್ ಕೊಡೋರಾ?

ಹಾಗೆಯೆ 2020ರ ಅಕ್ಟೋಬರ್‌ 1ರಂದು ಮತ್ತೊಂದು ಟ್ವೀಟ್‌ ಮಾಡಿದ್ದ ಜಿ ಎಂ ಸುರೇಶ್‌ ಅವರು ‘ಮಾನ್ಯ ಜಿಲ್ಲಾ ಮಂತ್ರಿಗಳೇ ಮೂಕ ಪ್ರಾಣಿಗಳಿಗೆ ಕೊಟ್ಟ ಮೇವಿನ ಬಿಲ್‌ ಕೊಡಿಸಿ. ನಿಮ್ಮ ಚಿಕ್ಕಬಳ್ಳಾಪುರದ ಅಧಿಕಾರಿಗಳಿಂದ. ನಿಮ್ಮ ಗಮನಕ್ಕೆ ಬಂದು ಒಂದು ವರ್ಷವಾದರೂ ಇನ್ನೂ ಪ್ರಯೋಜನ ಆಗಿಲ್ಲ. ಈ ಅಧಿಕಾರಿಗಳು ದನಗಳ ಜತೆಗೆ ಮನುಷ್ಯರನ್ನೂ ಸಾಯಿಸಿಬಿಡುತ್ತಾರೆ. ನೀವು ಕ್ರಮ ಕೈಗೊಳ್ಳದಿದ್ದರೇ ನಾವು ಸಾಯಬೇಕಾ ಹೇಳಿ, ನಾವು ಸತ್ತ ಮೇಲೆ ಬಿಲ್‌ ಕೊಡೋರಾ,’ ಎಂದು ಗಮನಕ್ಕೆ ತಂದಿದ್ದರು. ಆದರೂ ಚಿಕ್ಕಬಳ್ಳಾಪುರ ಜಿಲ್ಲಾ ಸಚಿವ ಡಾ ಕೆ ಸುಧಾಕರ್‌ ಆಗಲೀ, ಜಿಲ್ಲಾಡಳಿತವಾಗಲೀ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

ಪ್ರಧಾನಿಗೆ ನೀಡಿರುವ ದೂರಿನಲ್ಲೇನಿದೆ?

‘ಸರಬರಾಜುದಾರರು 3 ಲೋಡ್‌ನ್ನು ಮೇವನ್ನು ಸರಬರಾಜು ಮಾಡಿದ್ದರೂ ಲಂಚ ಮತ್ತು ಕಮಿಷನ್‌ ನೀಡದ ಕಾರಣಕ್ಕೆ ಅದನ್ನು ಒಂದು ಲೋಡ್‌ಗೆ ಪರಿವರ್ತಿಸಿದ್ದಾರೆ. ಇದು ಅನ್ಯಾಯ. ಕಮಿಷನ್‌ ಮತ್ತು ಲಂಚ ಕೊಡದಿರುವ ಸರಬರಾಜುದಾರರಿಗೆ ಮಾತ್ರ ಇಂತಹ ಅನ್ಯಾಯವಾಗುತ್ತಿದೆ. ಬಾಕಿ ಹಣವನ್ನು ಪಾವತಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆಯಲ್ಲದೆ ಕಮಿಷನ್‌, ಲಂಚ ಕೊಡದ ಸರಬರಾಜುದಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗುತ್ತಿದೆ. ಸಾಲಸೋಲ ಮಾಡಿ ಮೇವು ಸರಬರಾಜು ಮಾಡಿರುವ ಸರಬರಾಜುದಾರರಿಗೆ ಅತ್ಮಹತ್ಯೆಯೊಂದೇ ದಾರಿ,’ ಎಂದು ಜಿ ಎಂ ಸುರೇಶ್‌ ಎಂಬುವರು ಪ್ರಧಾನಿಗೆ ಬರೆದಿರುವ ದೂರಿನಲ್ಲಿ ವಿವರಿಸಿದ್ದಾರೆ.

ಅಲ್ಲದೆ ‘ ಮೇವು ಸರಬರಾಜು ಮಾಡಲು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆಯಲಾಗಿದೆ. ಮೇವು ಸಾಗಾಣಿಕೆ ಮಾಡಿರುವ ಲಾರಿ ಮಾಲೀಕರೂ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ಸರ್ಕಾರವು ನಿಗದಿತ ಅವಧಿಯಲ್ಲಿ ಬಾಕಿ ಹಣವನ್ನು ಪಾವತಿಸುತ್ತಿಲ್ಲ. ಹೀಗಾಗಿ ಸಾಲಗಾರರ ಒತ್ತಡ ಹೆಚ್ಚಿದೆ. ಅವರಿಂದ ಬೆದರಿಕೆಯೂ ಇದೆ. ಮುಂದೆ ನನ್ನ ಕುಟುಂಬದಲ್ಲಿ ಏನಾದರೂ ಸಂಭವಿಸಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ,’ ಎಂಬ ಎಚ್ಚರಿಕೆಯನ್ನೂ ದೂರಿನಲ್ಲಿ ನೀಡಿದ್ದಾರೆ.

ಪ್ರಧಾನಿಗೆ ದೂರು ಸಲ್ಲಿಸಿರುವ ಹರ್ಷ ಅಸೋಸಿಯೇಟ್ಸ್‌ನ ಜಿ ಎಂ ಸುರೇಶ್‌ ಎಂಬುವರು 2019ರ ಆಗಸ್ಟ್‌ನಲ್ಲಿ 591 ಮೆಟ್ರಿಕ್‌ ಟನ್‌ ಹಸಿರು ಮೇವನ್ನು ಚಿಕ್ಕಬಳ್ಳಾಪುರದ ಗೋ ಶಾಲೆಗಳಿಗೆ ಸರಬರಾಜು ಮಾಡಿದ್ದರು. ಒಂದು ಟನ್‌ಗೆ 11,500 ರು. (ಸಾಗಾಣಿಕೆ ವೆಚ್ಚ ಮತ್ತು ಇತರೆ ಖರ್ಚುಗಳು ಸೇರಿದಂತೆ) ಲೆಕ್ಕದಲ್ಲಿ 590 ಮೆಟ್ರಿಕ್‌ ಟನ್‌ಗೆ 70 ಲಕ್ಷ ರು. ವೆಚ್ಚವಾಗಿತ್ತು. ಆದರೆ ಈ ಹಣವನ್ನು 31 ತಿಂಗಳಾದರೂ ಸರಬರಾಜುದಾರಿಗೆ ಪಾವತಿಸಿಲ್ಲ ಎಂಬುದು ತಿಳಿದು ಬಂದಿದೆ.

ಕಮಿಷನ್‌ ಮತ್ತು ಲಂಚ ಕೊಡದಿದ್ದಕ್ಕೆ ಅಧಿಕಾರಿಗಳ ಭ್ರಷ್ಟಕೂಟವು ಹಸಿರು ಮೇವನ್ನು ಒಣ ಮೇವನ್ನಾಗಿ ಪರಿವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದ ಜಿ ಎಂ ಸುರೇಶ್‌ ಅವರು ನ್ಯಾಯಾಲಯದ ಮೆಟ್ಟಿಲೇರಿ ರಿಟ್‌ ಅರ್ಜಿಯನ್ನು ದಾಖಲಿಸಿದ್ದರು. ಇದಾದ ನಂತರ ಅಧಿಕಾರಿಗಳ ಭ್ರಷ್ಟಕೂಟವು ನ್ಯಾಯಾಲಯದ ಛೀಮಾರಿ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಒಟ್ಟು 70 ಲಕ್ಷ ರು. ಪೈಕಿ 36 ಲಕ್ಷ ರು.ಗಳನ್ನು ಅರ್ಜಿದಾರ ಜಿ ಎಂ ಸುರೇಶ್‌ ಅವರಿಗೆ ಪಾವತಿಸಿದ್ದಾರೆ. ಆ ಸಂದರ್ಭದಲ್ಲಿ ಎಲ್ಲಿಯೂ ಹಸಿರು ಮೇವನ್ನು ಒಣ ಮೇವನ್ನಾಗಿ ಪರಿವರ್ತಿಸುವ ಬಗ್ಗೆ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ.

ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರನ ಮನವಿಯನ್ನು ಪರಿಗಣಿಸಿ ಬಾಕಿ ಹಣವನ್ನು ಪಾವತಿಸಲಾಗುವುದು ಎಂದು ಒಪ್ಪಿಕೊಂಡಿದ್ದ ಅಧಿಕಾರಿಗಳ ಭ್ರಷ್ಟಕೂಟವು 70 ಲಕ್ಷ ರು.ನಲ್ಲಿ 36 ಲಕ್ಷ ರು ಮಾತ್ರ ಪಾವತಿಸಿ ಅದೇ ಹಣಕ್ಕೆ ಹೊಂದಾಣಿಕೆ ಮಾಡಿ ಉಳಿದ 34 ಲಕ್ಷ ರು.ಗಳನ್ನು ನೀಡದೇ ವಂಚಿಸಿದ್ದಾರೆ ಎಂದು ದೂರಲಾಗಿದೆ.

‘ಸರಬರಾಜು ಮಾಡಿರುವ ಹಸಿರು ಮೇವಿಗೆ, ಒಣ ಮೇವಾಗಿ 3;1ರ ಅನುಪಾತದಲ್ಲಿ ಪರಿವರ್ತಿಸಿರುವ ಕ್ರಮವು ಸರಿಯಾಗಿರುವುದಿಲ್ಲ. ಮೇವು ಸರಬರಾಜು ಮುಕ್ತಾಯಗೊಂಡ ದಿನಾಂಕದಿಂದ ಪಾವತಿ ಆಗಿರುವ/ಆಗುವ ತನಕ ಬಡ್ಡಿ ನೀಡಬೇಕು,’ ಎಂದು ಜಿ ಎಂ ಸುರೇಶ್‌ ಅವರ ಕೋರಿಕೆಯನ್ನು ಇಲಾಖೆಯು ನಿರಾಕರಿಸಿತ್ತು.

ಬದಲಿಗೆ ‘ಅರ್ಜಿದಾರರು ಒಣ ಮೇವಿನ ಪ್ರಮಾಣ ಕಡಿಮೆಯಾಗಿದ್ದು ಒಣ ಮೇವನ್ನು ಒದಗಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿರುವ ಮೇರೆಗೆ ಚಿಕ್ಕಬಳ್ಳಾಪುರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರು ಒಂದು ಗೋವಿಗೆ ಒಂದು ದಿನಕ್ಕೆ 6 ಕೆ ಜಿ ಯ ಒಣ ಮೇವು ಅಥವಾ 18 ಕೆ ಜಿ ಯ ಹಸಿರು ಮೇವಿನ ಜೊತೆಗೆ ಒಂದು ಕೆ ಜಿ ಪೌಷ್ಠಿಕಾಂಶಯುಕ್ತ ತೀಕ್ಷ್ಣಾಹಾರವನ್ನು ತಗಲುವ ಒಟ್ಟು ವೆಚ್ಚ ಪ್ರತಿ ಜಾನುವಾರುವಿಗೆ ಒಂದು ದಿನಕ್ಕೆ 100 ರು.ನಂತೆ ನಿಗದಿಪಡಿಸಲಾಗಿದೆ,’ ಎಂಬ ಸಮಜಾಯಿಷಿ ನೀಡಿದ್ದರು.

ಅಷ್ಟೇ ಅಲ್ಲ, ‘3 ಕೆ ಜಿ ಹಸಿರು ಮೇವನ್ನು 1 ಕೆ ಜಿ ಒಣ ಮೇವಾಗಿ ಪರಿಗಣಿಸಲು ತೆಗೆದುಕೊಂಡಿರುವ ತೀರ್ಮಾನವು ಸರಿ ಇದ್ದು, ಅದರಂತೆ 3;1ರ ಅನುಪಾತದಲ್ಲಿ ಪರಿಗಣಿಸಲು ಸೂಕ್ತವೆಂದು ಅಭಿಪ್ರಾಯ ಪಡಲಾಗಿದೆ. ಅರ್ಜಿದಾರರು ಸರಬರಾಜು ಮಾಡಿರುವ ಹಸಿರು ಮೇವಿಗೆ ಒಣ ಮೇವಾಗಿ 3;1ರ ಅನುಪಾತದಲ್ಲಿ ಪರಿವರ್ತಿಸಿರುವ ಕ್ರಮವು ಸರಿಯಾಗಿರುವುದಿಲ್ಲ. ಮತ್ತು ಹೆಚ್ಚುವರಿಯಾಗಿ ಅರ್ಜಿದಾರರಿಗೆ ಪಾವತಿಗೆ ಯಾವುದೇ ಮೊಬಲಗು ಬಾಕಿ ಇರದ ಕಾರಣ ಮೇವು ಸರಬರಾಜು ಮುಕ್ತಾಯಗೊಂಡ ದಿನಾಂಕದಿಂದ ಪಾವತಿ ಆಗಿರುವ ಮತ್ತು ಆಗುವ ತನಕ ಬಡ್ಡಿ ನೀಡಲು ಮೌಖಿಕವಾಗಿ ಕೋರಿರುವ ಬೇಡಿಕೆಯನ್ನು ತಿರಸ್ಕರಿಸಲಾಗಿದೆ,’ ಎಂದು ಚಿಕ್ಕಬಳ್ಳಾಪುರದ ಅಪರ ಜಿಲ್ಲಾಧಿಕಾರಿ ಅವರು 2022ರ ಜನವರಿ 12ರಂದು ಆದೇಶ ಹೊರಡಿಸಿದ್ದಾರೆ.

ಮೇವು ಸರಬರಾಜುದಾರರಾದ ಜೆ ಎಂ ಸುರೇಶ್‌ ಅವರು ಒಣ ಮೇವು ಸರಬರಾಜು ಮಾಡಲು ಕಷ್ಟಕರವಾಗಿರುವದುರಿಂದ 2019ರ ಆಗಸ್ಟ್‌ 14ರಂದು ಹೊರಡಿಸಿದ್ದ ಆದೇಶದಂತೆ ಹಸಿರು ಮೇವನ್ನು ಸರಬರಾಜು ಮಾಡಿದ್ದಲ್ಲಿ 1 ಮೆಟ್ರಿಕ್‌ ಟನ್‌ ಒಣ ಮೇವು, 3 ಮೆಟ್ರಿಕ್‌ ಟನ್‌ ಹಸಿರು ಮೇವಿಗೆ ಸರಿಸಮಾನಾಗಿ ಪರಿಗಣಿಸಿ ಪಾವತಿಸಲಾಗುವುದೆಂದು ತಿಳಿಸಿ ಅನುಮತಿ ನೀಡಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

ಅದರಂತೆ ಸರಬರಾಜು ಮಾಡಿದ ಹಸಿರು ಮೇವನ್ನು 3;1ರ ಅನುಪಾತದಲ್ಲಿ 2019ರ ಆಗಸ್ಟ್‌ 19ರ ನಡವಳಿಯಂತೆ ಲೆಕ್ಕ ಮಾಡಿರುವ ಇಲಾಖೆಯು 36, 54,472 ರು.ಗಳನ್ನು ಪಾವತಿಸಲಾಗಿದೆ ಎಂದು ಹೊಂದಾಣಿಕೆ ಮಾಡಿ ಚುಕ್ತಾ ಮಾಡಿರುವುದು ಗೊತ್ತಾಗಿದೆ.

ಕೃಪೆ: ದಿ ಫೈಲ್

Edited By : Vijay Kumar
PublicNext

PublicNext

16/04/2022 05:03 pm

Cinque Terre

35.99 K

Cinque Terre

2

ಸಂಬಂಧಿತ ಸುದ್ದಿ