ಬೆಂಗಳೂರು: ಹೈಕೋರ್ಟ್ ರದ್ದುಪಡಿಸಿದ್ದ 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಊರ್ಜಿತಗೊಳಿಸಿ, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ಧರಿಸಿದೆ. ಈ ಉದ್ದೇಶದಿಂದ ರಾಜ್ಯ ಸರ್ಕಾರ, ‘ಕರ್ನಾಟಕ ನಾಗರಿಕ ಸೇವೆಗಳು (ಆಯ್ಕೆಯ ಊರ್ಜಿತಗೊಳಿಸುವಿಕೆ ಮತ್ತು 2011ರ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿ) ಮಸೂದೆ–2022’ ಸಿದ್ಧಪಡಿಸಿದೆ. ಆ ಮೂಲಕ, ಅಕ್ರಮವಾಗಿ ನೇಮಕಗೊಂಡವರೆಂದು ಸಿಐಡಿ ತನಿಖೆಯಲ್ಲಿ ಗುರುತಿಸಿಕೊಂಡವರಿಗೂ ಹುದ್ದೆ ನೀಡಿ, ಇಡೀ ಪಟ್ಟಿಯನ್ನು ‘ಸಕ್ರಮ’ಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಅಕ್ರಮ ಸಾಬೀತಾಗಿದೆ ಎಂಬ ಕಾರಣಕ್ಕೆ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ 2018ರ ಮಾರ್ಚ್ 9 ರಂದು ಹೈಕೋರ್ಟ್ ನೀಡಿದ್ದ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಅಲ್ಲದೆ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನೂ ವಜಾಗೊಳಿಸಿತ್ತು. ಆಯ್ಕೆ ಪಟ್ಟಿ ರದ್ದುಗೊಂಡಿದ್ದರಿಂದ ಆಗ ಆಯ್ಕೆಯಾಗಿದ್ದವರಿಗೆ ಅನ್ಯಾಯವಾಗಿದ್ದು, ನ್ಯಾಯ ಒದಗಿಸಬೇಕೆಂಬ ಬೇಡಿಕೆ ವಿಧಾನಮಂಡಲದ ಒಳಗೆ, ಹೊರಗೆ ವ್ಯಕ್ತವಾಗಿತ್ತು. ವಿವಿಧ ಸಮುದಾಯಗಳ ಸ್ವಾಮೀಜಿಗಳು, ದೇವೇಗೌಡರು, ಸಿದ್ದರಾಮಯ್ಯ ಸೇರಿ ಪಕ್ಷಾತೀತವಾಗಿ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಇದೀಗ, ಕಾನೂನು ಮತ್ತು ಸಂಸದೀಯ ಇಲಾಖೆ ಸಿದ್ಧಪಡಿಸಿರುವ ಮಸೂದೆಗೆ ಇದೇ 9ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದೇ 14 ರಿಂದ ನಡೆಯಲಿರುವ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ. ಶಾಸಕರ ಹಕ್ಕುಚ್ಯುತಿ ಪ್ರಸ್ತಾವ: ಈ ಮಧ್ಯೆ, ‘ಈ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಈ ಹಿಂದೆ ಸರ್ಕಾರ ವಾಪಸು ಪಡೆದಿದ್ದ ಪ್ರಕರಣದಲ್ಲಿ ಸಂವಿಧಾನದ ಅನುಚ್ಛೇದ 323 (2) ಉಲ್ಲಂಘನೆಯಾಗಿದ್ದು, ಹಕ್ಕುಬಾಧ್ಯತೆ ಪ್ರಶ್ನೆಗಳು ಉದ್ಭವಿಸಿವೆ. ಶಾಸಕರ ಹಕ್ಕುಚ್ಯುತಿ ಉಂಟಾಗಿದೆ’ ಎಂದು ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸೇರಿ ಒಂಬತ್ತು ಸದಸ್ಯರು ವಿಧಾನ ಪರಿಷತ್ ಕಾರ್ಯದರ್ಶಿಗೆ ಸೂಚನಾ ಪತ್ರ ನೀಡಲು ಮುಂದಾಗಿದ್ದಾರೆ.
ಸೂಚನಾಪತ್ರದ ಪ್ರತಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಸದಸ್ಯರಾದ ನಜೀರ್ ಅಹ್ಮದ್, ಎಸ್. ರವಿ, ಯು.ಬಿ. ವೆಂಕಟೇಶ್, ಮೋಹನ್ ಕುಮಾರ್ ಕೊಂಡಜ್ಜಿ, ಸಲೀಂ ಅಹ್ಮದ್, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಭೋಜೇಗೌಡ ಸಹಿ ಹಾಕಿದ್ದಾರೆ. ‘ಸಂವಿಧಾನದ ಅನುಚ್ಛೇದ 323 (2) ಅನ್ನು ಪಾಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ನೀಡಿದ್ದ ತಪ್ಪು ಹೇಳಿಕೆ ಆಧರಿಸಿ, ಈ ಸಾಲಿನ ಆಯ್ಕೆ ರದ್ದುಪಡಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಇಲ್ಲಿ ಶಾಸಕಾಂಗದ ಸದಸ್ಯರ ಹಕ್ಕುಚ್ಯುತಿ ಆಗಿದೆ. ಅಲ್ಲದೆ, ಸಂವಿಧಾನಾತ್ಮಕ ಮತ್ತು ಶಾಸಕಾಂಗದ ನಿಂದನೆಯೂ ಆಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಸರ್ಕಾರವು ಸಂವಿಧಾನದ ಅನುಚ್ಛೇದ 323 (2)ರಂತೆ ಭಾಗಶಃ ಅಂದರೆ, ಕೇವಲ 2014–15ನೇ ಸಾಲಿನ ಕೆಪಿಎಸ್‌ಸಿಯ ವಾರ್ಷಿಕ ವರದಿಯನ್ನು ಮಾತ್ರ ವಿಧಾನಸಭೆಯಲ್ಲಿ ಮಂಡಿಸಿದೆ. ವರದಿಯ ಭಾಗವಾದ ಟಿಪ್ಪಣಿಯಲ್ಲಿ ಪ್ರಕರಣವು ಕೆಎಟಿ ವಿಚಾರಣೆಯಲ್ಲಿದೆ ಎಂದು ಮಾತ್ರ ವಿವರಿಸಲಾಗಿದೆ. ಈ ಅನುಚ್ಛೇದದ ಪ್ರಕಾರ, ಕೆಪಿಎಸ್‌ಸಿಯ ಸಲಹೆಯನ್ನು (ಆಯ್ಕೆ ಪಟ್ಟಿ) ಸರ್ಕಾರ ಒಪ್ಪದೇ ಇದ್ದರೆ ಅದಕ್ಕೆ ಕಾರಣವೇನೆಂದು ವಿವರಿಸುವ ವಿವರಣಾ ಪತ್ರದೊಂದಿಗೆ ಎರಡೂ ಸದನಗಳಲ್ಲಿ ವಾರ್ಷಿಕ ವರದಿ ಮಂಡಿಸಬೇಕಿತ್ತು. ಈ ಅನುಚ್ಛೇದದ ಮಹತ್ವವನ್ನು ಹಲವು ನ್ಯಾಯಾಲಯಗಳು ಒತ್ತಿ ಹೇಳಿವೆ. ಆದರೆ, ವಿಧಾನಸಭೆಯಲ್ಲಿ 2017ರಲ್ಲಿ ಮಂಡಿಸಿದ್ದ ವರದಿಯನ್ನು 2019ರಲ್ಲಿ ವಿಧಾನಪರಿಷತ್‌ನಲ್ಲಿ ಕಾಟಾಚಾರಕ್ಕೆ ಎಂಬಂತೆ ಮಂಡಿಸಲಾಗಿದೆ. ಇದರಿಂದ ಶಾಸಕ ಹಕ್ಕುಚ್ಯುತಿ ಆಗಿದೆ’ ಎಂದು ಸೂಚನಾ ಪತ್ರದಲ್ಲಿ ವಾದಿಸಲಾಗಿದೆ.
‘ಅನುಚ್ಛೇದನ ಉಲ್ಲಂಘನೆಯ ಬಗ್ಗೆ ಎರಡೂ ಸದನಗಳ ಶಾಸಕರು ಈ ಹಿಂದೆ ಬರೆದಿದ್ದ ಪತ್ರವನ್ನು ಪರಿಗಣಿಸಿದ್ದ ರಾಜ್ಯಪಾಲರು, ಈ ವಿಷಯದಲ್ಲಿ ಗಮನಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಆದರೆ, ನಾವು ಅನೇಕ ಬಾರಿ ಮನವಿ ಸಲ್ಲಿಸಿದರೂ ಮುಖ್ಯ ಕಾರ್ಯದರ್ಶಿ ಸ್ಪಂದಿಸಿಲ್ಲ. ಆಯ್ಕೆ ಪಟ್ಟಿ ರದ್ದುಪಡಿಸಿ, ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸುವ ಮೊದಲು ಅನುಚ್ಛೇದ 323 (2) ಪಾಲನೆ ಕಡ್ಡಾಯ ಅಲ್ಲವೇ? ತಪ್ಪು ಮಾಹಿತಿ ಪಡೆದ ಹೈಕೋರ್ಟ್ ತೀರ್ಪು ಅನ್ನು ಸರ್ಕಾರ ಜಾರಿ ಮಾಡಬಹುದೇ? ಹೀಗೆ ಹಲವು ಪ್ರಶ್ನೆಗಳನ್ನು ಸೂಚನಾ ಪತ್ರದಲ್ಲಿ ಕೇಳಲಾಗಿದೆ.
‘ಸರ್ಕಾರವು ಕೋರ್ಟ್ ತೀರ್ಪು ಪಾಲಿಸಿತ್ತು’ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಲಿಖಿತ ಉತ್ತರ ನೀಡಿದ್ದ ಮುಖ್ಯಮಂತ್ರಿ, ‘ಕೆಪಿಎಸ್‌ಸಿ ವಾರ್ಷಿಕ ವರದಿ ಮಂಡಿಸುವ ವೇಳೆ ಸರ್ಕಾರವು 2011ನೇ ಸಾಲಿನ ನೇಮಕಾತಿ ಅಧಿಸೂಚನೆ ಹಿಂತೆಗೆದುಕೊಂಡಿದ್ದ ಆದೇಶವು ಕಾನೂನಾತ್ಮಕವಾಗಿ ಸಿಂಧು ಆಗಿರಲಿಲ್ಲ. ಹೀಗಾಗಿ ಆಯೋಗದ ಪ್ರಸ್ತಾವನೆಯನ್ನು ಒಪ್ಪದಿರುವ ಕಾರಣಗಳೊಂದಿಗೆ ವಿವರಣಾ ಪತ್ರ ಸಲ್ಲಿಸುವ ಸನ್ನಿವೇಶ ಉದ್ಭವಿಸುವುದಿಲ್ಲ.
ಕೆಪಿಎಸ್‌ಸಿಯ ಆಯ್ಕೆ ಪಟ್ಟಿಯನ್ನು ಸರ್ಕಾರವು ಸ್ವಯಂ ತಿರಸ್ಕರಿಸಿಲ್ಲ. ಹೀಗಾಗಿ, ಇದು ಅನುಚ್ಛೇದ 323(2) ಅಡಿ ಒಳಪಡುವುದಿಲ್ಲ ಮತ್ತು ಅನುಚ್ಛೇದ ಉಲ್ಲಂಘನೆ ಆಗಿಲ್ಲ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಲಾಗಿದೆ. ಹೈಕೋರ್ಟ್ ತೀರ್ಪು ಅನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದೆ. ಸರ್ಕಾರವು ಕೋರ್ಟ್ ತೀರ್ಪುಗಳನ್ನು ಪಾಲಿಸಿದೆ’ ಎಂದು ತಿಳಿಸಿದ್ದರು.
ಕೃಪೆ- ಪ್ರಜಾ ವಾಣಿ
PublicNext
07/02/2022 04:21 pm