ಚಿಕ್ಕಬಳ್ಳಾಪುರ: ಉಡುಪಿಯ ಶಾಲಾ-ಕಾಲೇಜುಗಳಲ್ಲಿ ಶುರುವಾದ ಹಿಜಾಬ್, ಕೇಸರಿ ಶಾಲು ವಿವಾದ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಇದರ ಬೆನ್ನಲ್ಲೇ ಸರ್ಕಾರ ಸಮವಸ್ತ್ರ ನೀತಿ ಜಾರಿ ಮಾಡಿದ್ದೂ ಆಗಿದೆ. ಇದರ ಬಗ್ಗೆ ಈಗಾಗಲೇ ಪರ-ವಿರೋಧದ ಚರ್ಚೆಗಳು ಆರಂಭವಾಗಿದೆ. ಹೀಗಿರುವಾಗ ಸಮವಸ್ತ್ರದ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಅಂಗನವಾಡಿ ಸಿಬ್ಬಂದಿಗೆ ಸೀರೆಯನ್ನು ಸಮವಸ್ತ್ರವಾಗಿ ಜಾರಿ ಮಾಡಲಾಗಿದ್ದು ಅದರಲ್ಲಿ ಸರ್ಕಾರದ ಯೋಜನೆಯೊಂದನ್ನು ಮುದ್ರಿಸಲಾಗಿದೆ. ಹೀಗಾಗಿ ಆ ಸೀರೆಯನ್ನು ಅಂಗನವಾಡಿ ಶಿಕ್ಷಕಿಯರು, ಸಹಾಯಕರು ನಿರಾಕರಿಸಿದ್ದಾರೆ.
ಅಂಗನವಾಡಿಗಳಲ್ಲಿ ಕೆಲಸ ಮಾಡ್ತಿರುವ ಶಿಕ್ಷಕಿಯರು ಹಾಗೂ ಸಹಾಯಕಿಯರು, ಸರ್ಕಾರದ ಡ್ರೆಸ್ ಕೋಡ್ ಜಾರಿಗೆ ವಿರೋಧ ವ್ಯಕ್ತಪಡಿಸಿಲ್ಲವಾದ್ರೂ ಸೀರೆಯ ಮೇಲೆ ಜಾಹಿರಾತು ಮುದ್ರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ನೌಕರರು ಸರ್ಕಾರದ ಸೀರೆಯನ್ನು ಬಹಿಷ್ಕರಿಸಿ ಸೀರೆಗಳನ್ನು ಸ್ವೀಕರಿಸದ ಕಾರಣ ರಾಜ್ಯಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸೀರೆಗಳು, ಆಯಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲೆ ಕೊಳೆಯುತ್ತಿವೆ. ಇದರಿಂದ ಗೊಂದಲಕ್ಕೆ ಸಿಲುಕಿರುವ ಇಲಾಖೆಯ ಅಧಿಕಾರಿಗಳು, ಸರ್ಕಾರಕ್ಕೆ ಪತ್ರ ಬರೆದು ಮಾರ್ಗದರ್ಶನ ನೀಡಲು ಕೋರಿದ್ದಾರೆ. ನಾವೇನು ಸರ್ಕಾರದ ಜಾಹೀರಾತು ಪ್ರಚಾರ ಮಾಡುವ ವಸ್ತುಗಳಾ? ಎಂದು ಅಂಗನವಾಡಿ ನೌಕರರು ಆಕ್ರೋಶಿತರಾಗಿದ್ದಾರೆ.
PublicNext
06/02/2022 09:45 am