ಬೆಳಗಾವಿ : ಕುಂದಿಯುತ್ತ ಕುಂದಾನಗರಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮೂರ್ತಿ ಭಗ್ನ ಮಾಡಿದ ಆರೋಪಿಗಳ ಮೇಲೆ ದೇಶ ದ್ರೋಹ, ಗೂಂಡಾ ಆ್ಯಕ್ಟ್ ಕೇಸ್ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟದ ಸಂಬಂಧ ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು. ಗಡಿ ವಿಚಾರದಲ್ಲಿ ಒಂದು ಇಂಚು ಜಾಗ ಬಿಟ್ಟುಕೊಡುವ ಮಾತೇ ಇಲ್ಲಾ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ನಮ್ಮ ಹೊಣೆ ಎಂದರು.
ಮಹಾರಾಷ್ಟ್ರದಲ್ಲಿರು ಕನ್ನಡಿಗರು ನಾವು ಕರ್ನಾಟಕಕ್ಕೆ ಸೇರುತ್ತೇವೆ ಎಂದರೆ ಅದಕ್ಕೆ ನಾವು ದಿಟ್ಟ ನಿಲುವಿನ ಮೂಲಕ ಕ್ರಮ ಕೈಗೊಳ್ಳಲಿದ್ದೇವೆ. ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿರೋ ವಿಚಾರವಾಗಿ ಅಲ್ಲಿನ ಡಿಜಿಪಿಯೊಂದಿಗೆ ಮಾತನಾಡಿದ್ದೇವೆ. ಕನ್ನಡಿಗರ ರಕ್ಷಣೆ ನಿಮ್ಮ ಹೊಣೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ, ಮಹಾರಾಷ್ಟ್ರದ ಸಿಎಂ ಜೊತೆಗೆ ಈ ವಿಚಾರವಾಗಿ ಮಾತುಕತೆ ನಡೆಸೋದಾಗಿ ತಿಳಿಸಿದರು.
ಮೂರ್ತಿ ಭಗ್ನ ಕೃತ್ಯ ಎಸಗಿದವರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ದೇಶದ್ರೋಹದ ಕೇಸ್ ಹಾಕಿ ಅವರ ಹಿನ್ನಲೆಯನ್ನು ತನಿಖೆ ಮಾಡಲಾಗುತ್ತದೆ ಎಂದರು. ಬೆಳಗಾವಿಯ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇವರ ಹೆಸರು ಸೂರ್ಯ-ಚಂದ್ರರು ಇರೋವರೆಗೆ ಅಜರಾಮರವಾಗಿಸೋ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
PublicNext
20/12/2021 07:59 pm