ಮಂಡ್ಯ: ರಾಜ್ಯ ಸರ್ಕಾರವು ಬುಧವಾರ 9 ಜನ ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಮಂಡ್ಯ ಜಿಲ್ಲೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಯನ್ನು (ಎಸ್‌ಪಿ) ನೇಮಿಸಿ ಆದೇಶ ಹೊರಡಿಸಿದೆ. ಅದರ ಬೆನ್ನಲ್ಲೇ ಅವರಿಗೆ ಅಧಿಕಾರ ಸ್ವೀಕರಿಸದಂತೆ ಇಂದು ದಿಢೀರ್ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮಂಡ್ಯ ಎಸ್‌ಪಿ ಆಗಿದ್ದ ಅಶ್ವಿನಿ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪದ ಬೆನ್ನಲ್ಲೇ ರಾಜ್ಯ ಸರ್ಕಾರ ಅಶ್ವಿನಿ ಅವರನ್ನು ಮಂಡ್ಯದಿಂದ ವರ್ಗಾವಣೆ ಮಾಡಿ, ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಇದ್ದ ಐಪಿಎಸ್ ಆಫೀಸರ್ ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸುವುದಾಗಿ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿತ್ತು. ಇದೀಗ ಪೆನ್ನೇಕರ್ ಅವರು ಅಧಿಕಾರ ಸ್ವೀಕಾರ ಮಾಡದಂತೆ ಮೌಖಿಕವಾಗಿ ಗೃಹ ಸಚಿವರು ಆದೇಶ ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆ ಗಮನಿಸಿದರೆ ನಿನ್ನೆ ಮಂಡ್ಯಕ್ಕೆ ವರ್ಗಾವಣೆಗೊಂಡಿರುವ ಖಡಕ್ ಐಪಿಎಸ್ ಅಧಿಕಾರಿಗೆ ಬೆದರಿದರಾ ಸ್ಥಳೀಯ ರಾಜಕಾರಣಿಗಳು? ವರ್ಗಾವಣೆಯಾದರೂ ಮಂಡ್ಯಕ್ಕೆ ಬರಲು ಪ್ರಭಾವಿಗಳು ಬಿಡುತ್ತಿಲ್ಲವಾ? ಎಂಬ ಅನುಮಾನಗಳು ಮೂಡಿವೆ.
PublicNext
21/10/2021 02:56 pm