ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

" ರಾಜಕೀಯ ಸೇಡು " ಎಂಬ ಭ್ರಷ್ಟ ನಾಯಕರ ಫ್ರೀ ರಕ್ಷಾ ಕವಚ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

" ರಾಜಕೀಯ ಸೇಡು " ಎಂಬ ಪದ ಈ ಭ್ರಷ್ಟ ರಾಜಕಾರಣಿಗಳಿಗೆ ಪುಕ್ಕಟೆಯಾಗಿ ಸಿಕ್ಕ ರಕ್ಷಾ ಕವಚ. ಇವರು ಎಷ್ಟೇ ತಿಂದು ತೇಗಿರಲಿ, ನುಂಗಿ ನೀರು ಕುಡಿದಿರಲಿ, ಕೋಟ್ಯಂತರ ರೂ ಅವ್ಯವಹಾರ ಮಾಡಿರಲಿ, ಅಕ್ರಮ ಆಸ್ತಿ ಗಳಿಸಿರಲಿ, ಮನೆಯಲ್ಲಿ ಲಕ್ಷ ಲಕ್ಷ ಬಚ್ಚಿಟ್ಟಿರಲಿ ಯಾರೂ ಇವರನ್ನು ಪ್ರಶ್ನಿಸಕೂಡದು. ಯಾವುದೇ ರೀತಿ ತನಿಖೆ ಮಾಡಕೂಡದು. ಏಕೆಂದರೆ ಇವರು ಶುಭ್ರ ಬಟ್ಟೆ ರಾಜಕಾರಣಿಗಳಲ್ಲವೆ?

ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ಹಣ ಹೇಗೆ ಬಂತು? ನೂರಾರು ಸಾವಿರಾರು ಎಕರೆ ಜಮೀನು ಖರೀದಿ ಹೇಗಾಯಿತು? ಹತ್ತಾರು ಬಂಗ್ಲೆಗಳ ಮಾಲಿಕ ಹೇಗೆ ಆದರೂ?....ಊಹೂಂ..ಇದ್ಯಾವುದಕ್ಕೂ ಉತ್ತರವಿಲ್ಲ.

ಸಿಬಿಐ ಇರಬಹುದು, ಲೋಕಾಯುಕ್ತ ಇರಬಹುದು ಅಥವಾ ಇನ್ನಾವುದೇ ತನಿಖಾ ಸಂಸ್ಥೆಗಳ ಕ್ರಮಕೈಗೊಂಡಾಗ ಈ ಭ್ರಷ್ಟ ರಾಜಕಾರಣಿಗಳಿಂದ ಕೇಳಿಬರುವ ಅತ್ಯಂತ ಪ್ರಾಮಾಣಿಕ ಮಾತೆಂದರೆ " ರಾಜಕೀಯ ಪ್ರತಿಕಾರಕ್ಕಾಗಿ, ನಮ್ಮನ್ನು ರಾಜಕೀಯವಾಗಿ ಹಣಿಯಲು ಅಧಿಕಾರೂಢ ಪಕ್ಷದ ನಾಯಕರು ಮಾಡಿದ ಕುತಂತ್ರ '' ಎಂಬ ಅಣಿಮುತ್ತುಗಳನ್ನು ಮಾಧ್ಯಮಗಳ ಮುಂದೆ ಉದುರಿಸುತ್ತಾರೆ.

ತಮ್ಮ ಬುಡಕ್ಕೆ ನೀರು ಬಂದಾಗ ಎಲ್ಲ ತನಿಖಾ ಸಂಸ್ಥೆಗಳು ಅಧಿಕಾರೂಢ ಪಕ್ಷದ ಕೈಗೊಂಬೆಗಳಾಗುತ್ತವೆ. ಡಿನೋಟಿಫಿಕೇಷನ್ ಪ್ರಕರಣದಲ್ಲಿ 2011 ರಲ್ಲಿ ಯಡಿಯೂರಪ್ಪನವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಜೈಲಿಗೆ ತಳ್ಳಿದಾಗ ಇದೇ ಕಾಂಗ್ರೆಸ್ಸಿಗೆ ಲೋಕಾಯುಕ್ತ ಸಂಸ್ಥೆ ಪ್ರಾಮಾಣಿಕವಾಗಿ ಕಂಡುಬಂದಿತ್ತು.

ತಾವೇ ಅಧಿಕಾರದಲ್ಲಿದ್ದರೂ ಬಿಎಸ್ವೈ ಆರೋಪ ಹೊತ್ತು ಜೈಲಿಗೆ ಹೋದರು. ಯಾರೇ ಆಗಲಿ ಮಾಡಿದ್ದುಣ್ಣೊ ಮಹಾರಾಯ, ಅದು ಅವರವರ ಹಣೆ ಬರಹ.

ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಹೀಗೆ ಎಲ್ಲ ಪಕ್ಷಗಳೂ ಅಧಿಕಾರದಲ್ಲಿದ್ದಾಗ ತಮ್ಮ ವಿರೋಧಿಗಳನ್ನು ಹಣಿಯಲು ತಾವೇನು ತಂತ್ರ ಹೂಡಿದ್ದವು ಎಂಬುದನ್ನು ಮರೆತು ಬಿಡುತ್ತವೆ.

ಕಾಂಗ್ರೆಸ್ಸಿನ ATM ಎಂದೇ ಖ್ಯಾತರಾಗಿರುವ ಡಿಕೆಶಿ CBI ಹಾಗೂ ED ವಿಚಾಣೆಯಿಂದ ಅತ್ಯಂತ ವ್ಯಗ್ರರಾಗಿದ್ದಾರೆ. ಕೊರೊನಾ ಸಮಯದಲ್ಲಿ ನಡೆದ 400 ಕೋಟಿ ಅವ್ಯವಹಾರ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿದ್ದೆ. ಈಗ ಉಪಚುನಾವಣೆಯಲ್ಲಿ ನನ್ನ ಬಾಯಿ ಮುಚ್ಚಿಸಲು ಸಿಬಿಐ ತನಿಖೆಗೆ ಅನುಮತಿ ನೀಡಿ ನನಗೆ ಯಡಿಯೂರಪ್ಪ ಕಿರುಕಳ ನೀಡುತ್ತಿದ್ದಾರೆ. ಇಂತಹ ಕ್ಷುಲ್ಲಕ ಬೆದರಿಕೆಗಳಿಗೆ ಹೆದರುವ ಮಗ ನಾನಲ್ಲ. 2024 ವಿಧಾನಸಭಾ ಚುನಾವಣೆವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದೂ ಘೋಷಿಸಿದ್ದಾರೆ.

ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ,ಶಿವಕುಮಾರ ಯಾರೇ ಅಗಿರಲಿ ಒಂದು ವೇಳೆ ತಾವು ಸಾಚಾ ಆಗಿದ್ದರೆ ತನಿಖೆ ಅಂಜವುದೇಕೆ? ತಾವು ಯಾವುದೇ ಅವ್ಯವಹಾರ, ಅಕ್ರಮ ಮಾಡಿದ್ದಿಲ್ಲವಾದರೆ ತನಿಖಾ ಸಂಸ್ಥೆಗಳಿಗೆ ಸಮರ್ಪಕ ದಾಖಲೆ ನೀಡಬಹುದಲ್ಲವೆ? ಅದನ್ನು ಬಿಟ್ಟು ತಮ್ಮ ಪಕ್ಷದ ಹಿಂಬಾಲಕರನ್ನು ಬಿಟ್ಟು ಪ್ರತಿಭಟನೆ, ಹೋರಾಟ ಮಾಡಿಸುವುದು ಎಷ್ಟು ಸೂಕ್ತ?

ರಸ್ತೆಯಲ್ಲಿ ಟೈರ್ ಸುಟ್ಟು ಮಾಡುವ ಪ್ರತಿಭಟನೆಗಳಿಂದ ಏನೂ ಪ್ರಯೋಜವಿಲ್ಲ, ಬದಲಾಗಿ ಜನಸಾಮಾನ್ಯರಲ್ಲಿ ಸಂಶಯ ಇನ್ನೂ ಬಲವಾಗ ತೊಡಗುತ್ತದೆ. ಡಿ.ಕೆ ಶಿವಕುಮಾರ್ ಅವರೆ ಇಷ್ಟೆಲ್ಲ ಆಸ್ತಿಪಾಸ್ತಿ ಹಾಗೂ ಸಧ್ಯ ಮನೆಗಳಲ್ಲಿ ಸಿಕ್ಕಿದೆ ಎನ್ನಲಾಗುವ 57 ಲಕ್ಷ ರೂ ನೀವು ಪ್ರಾಮಾಣಿಕವಾಗಿ, ಬೆವರು ಸುರಿಸಿ ಗಳಿಸಿದ್ದರೆ ಲೆಕ್ಕ ಕೊಟ್ಟು ಆರೋಪದಿಂದ ಮುಕ್ತರಾಗಬಹುದಲ್ಲವೆ? ಅದನ್ನು ಬಿಟ್ಟು ರಾಜಕೀಯ ಸೇಡು ಎಂಬ ಸವಕಲು ಕವಚದ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸಬೇಡಿ. ಒಂದಿಲ್ಲೊಂದ ದಿನ ಎಲ್ಲರ ಬಣ್ಣ ಬಯಲಾಗಲೇ ಬೇಕು.

Edited By :
PublicNext

PublicNext

06/10/2020 03:31 pm

Cinque Terre

163.23 K

Cinque Terre

20

ಸಂಬಂಧಿತ ಸುದ್ದಿ